ಬೆಂಗಳೂರು: ನಗರದ ರಸ್ತೆ ಗುಂಡಿಗಳಿಗೆ ಸಂಬಂಧಪಟ್ಟಂತೆ ತಪ್ಪಿತಸ್ಥ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವ ಆಮ್ ಆದ್ಮಿ ಪಾರ್ಟಿಯ ಅಭಿಯಾನವು ಭರದಿಂದ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ಬೃಹತ್ ಜನಸ್ತೋಮದೊಂದಿಗೆ ಬಿಬಿಎಂಪಿ ಕಚೇರಿಗೆ ಮುತ್ತಿಗೆ ಹಾಕಿ ಬೀಗ ಜಡಿದು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಪಕ್ಷದ ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮೋಹನ್ ದಾಸರಿ, ರಸ್ತೆ ಗುಂಡಿಗಳ ವಿರುದ್ಧ ಆಮ್ ಆದ್ಮಿ ಪಾರ್ಟಿ ನಡೆಸಿದ ಹಲವು ಪ್ರತಿಭಟನೆಗಳು ಹಾಗೂ ರಸ್ತೆ ಗುಂಡಿ ಹಬ್ಬ ಎಂಬ ವಿನೂತನ ಚಳವಳಿಗೆ ಉತ್ತಮ ಜನಮನ್ನಣೆ ದೊರೆತಿದೆ. ಸಾಮಾಜಿಕ ಜಾಲತಾಣಗಳಲ್ಲೂ ಜನಬೆಂಬಲ ವ್ಯಕ್ತವಾಗುತ್ತಿದ್ದು, ಟ್ವಿಟರ್‌ನಲ್ಲಿ ನಮ್ಮ ಅಭಿಯಾನಗಳು ಟ್ರೆಂಡ್ ಆಗುತ್ತಿವೆ.
ವಾಹನ ಸವಾರರ ಜೀವ ತೆಗೆಯುತ್ತಿರುವ ಗುಂಡಿಗಳ ಬಗ್ಗೆ ಜನರು ಪಕ್ಷಕ್ಕೆ ಮಾಹಿತಿ ನೀಡುತ್ತಿದ್ದು, ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಗುಂಡಿಗಳಿಗೆ ಕಾರಣರಾದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುತ್ತಿದ್ದಾರೆ. 75ಕ್ಕೂ ಹೆಚ್ಚು ಅಪರಾಧ ಪ್ರಕರಣಗಳನ್ನು ಈವರೆಗೆ ದಾಖಲಿಸಲಾಗಿದ್ದು, 30ಕ್ಕೂ ಹೆಚ್ಚು ಕಾರ್ಪೊರೇಟರ್‌ಗಳನ್ನು ಆರೋಪಿಗಳನ್ನಾಗಿ ಮಾಡಲಾಗಿದೆ ಎಂದು ತಿಳಿಸಿದರು.