ಬೆಂಗಳೂರು:ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣದ ಹೆಸರಿನಲ್ಲಿ ಸಾವಿರಾರು ಕೋಟಿ ಮೌಲ್ಯದ ಭೂ ಕಬಳಿಕೆಯಾಗಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಆಪ್ ನಗರ ಅಧ್ಯಕ್ಷ ಮೋಹನ್ ದಾಸರಿ ಗುಡುಗಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಪ್ರಭಾವಿ ನಾಯಕರ ಒಡೆತನದ ಬಿಲ್ಡರ್ ಕಂಪನಿಗಳಿಗೆ ನಗರದ ಸಾವಿರಾರು ಕೋಟಿ ಬೆಲೆಬಾಳುವ ಆಸ್ತಿಗಳನ್ನು ಅಭಿವೃದ್ಧಿಯ ಹೆಸರಿನಲ್ಲಿ ಸಾರಾಸಗಟಾಗಿ ನೀಡಿರುವುದು ಬೆಂಗಳೂರಿಗರ ಪಾಲಿಗೆ ದುರ್ದೈವದ ಸಂಗತಿ.
ಬಿಡಿಎ ಅಧ್ಯಕ್ಷರಾದ ಎಸ್.ಆರ್.ವಿಶ್ವನಾಥ್ ಅಕ್ರಮವಾಗಿ ಹಣ ಮಾಡಲು ಒಂದಿಲ್ಲೊಂದು ಯೋಜನೆ ರೂಪಿಸುತ್ತಲೇ ಇದ್ದಾರೆ. ಈಗ ಏಳು ಬಿಡಿಎ ಕಾಂಪ್ಲೆಕ್ಸ್‌ಗಳ ಮರು ನಿರ್ಮಾಣ ಮಾಡುವ ಉದ್ದೇಶ ಕೂಡ ದೊಡ್ಡ ಪ್ರಮಾಣದಲ್ಲಿ ಲೂಟಿ ಮಾಡುವುದೇ ಆಗಿದೆ ಎಂದರು.
ಆಪ್ ನಗರ ಅಧ್ಯಕ್ಷ ಮೋಹನ್ ದಾಸರಿ ಇಂದಿರಾನಗರ, ಆಸ್ಟಿನ್ ಟೌನ್, ವಿಜಯನಗರ, ಸದಾಶಿವನಗರ, ದೊಮ್ಮಲೂರು ಎಚ್.ಎಸ್. ಆರ್ ಬಡಾವಣೆ ಸೇರಿದಂತೆ ಯಾವುದೇ ಕಾರಣಕ್ಕೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾಂಪ್ಲೆಕ್ಸ್‌ಗಳನ್ನು ಒಡೆಯಲು ಹಾಗೂ ಅವು ಖಾಸಗಿಯವರ ಪಾಲಾಗಲು ಬಿಡುವುದಿಲ್ಲ ಎಂದು ಎಎಪಿಯ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಹೇಳಿದರು.
ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಕೂಡ ಇದೇ ಯೋಜನೆಗೆ ಕೈಹಾಕಿತ್ತು. ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಯೋಜನೆಯನ್ನು ಜಾರಿಗೆ ತಂದಿರಲಿಲ್ಲ. ಆಗ ವಿರೋಧಿಸಿದ್ದ ಬಿಜೆಪಿಯವರೇ ಈಗ ಮರು ನಿರ್ಮಾಣದ ಹೆಸರಿನಲ್ಲಿ ದುಡ್ಡು ಮಾಡಲು ಹೊರಟಿದ್ದಾರೆ. ವಿರೋಧ ಪಕ್ಷದಲ್ಲಿದ್ದಾಗ ಒಂದು ನಿಲುವು, ಅಧಿಕಾರದಲ್ಲಿದ್ದಾಗ ಮತ್ತೊಂದು ನಿಲುವು ತೆಗೆದುಕೊಳ್ಳುವ ಬಿಜೆಪಿಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಡಿಎ ಕಾಂಪ್ಲೆಕ್ಸ್‌ಗಳು ಅಮೂಲ್ಯ ಸರ್ಕಾರಿ ಸ್ವತ್ತುಗಳು. ಮರುನಿರ್ಮಾಣದ ಹೆಸರಿನಲ್ಲಿ ಬರೋಬ್ಬರಿ 5,000 ಕೋಟಿ ರೂಪಾಯಿ ಮೌಲ್ಯದ ಅವುಗಳನ್ನು ಖಾಸಗಿಯವರಿಗೆ ನೀಡಲಾಗುತ್ತಿದೆ. ಇದಕ್ಕೆ ಪ್ರತಿಯಾಗಿ ಖಾಸಗಿಯವರಿಂದ ಬಿಡಿಎ ಅಧ್ಯಕ್ಷರಿಗೆ ಭಾರೀ ಪ್ರಮಾಣದ ಕಿಕ್‌ಬ್ಯಾಕ್ ಸಿಗಲಿದೆ. ಈಗ 30 ವರ್ಷಗಳ ಅವಧಿಗೆ ಖಾಸಗಿಯವರಿಗೆ ಬಿಟ್ಟುಕೊಟ್ಟು, ನಂತರ ಅದನ್ನು ಮತ್ತೆ 30 ವರ್ಷ ವಿಸ್ತರಿಸಲೂ ಅವಕಾಶ ನೀಡಲಾಗುತ್ತಿದೆ.
ಆದರೆ, 60 ವರ್ಷಗಳ ಬಳಿಕವೂ ಅವು ಸರ್ಕಾರದ ಸುಪರ್ದಿಗೆ ಮರಳುವುದಿಲ್ಲ. ದಿವ್ಯಶ್ರೀ ಚೇಂಬರ್ಸ್, ಚಿಕ್ಕಪೇಟೆಯಲ್ಲಿರುವ ಕೆಂಪೇಗೌಡ ಮಹಾರಾಜ ಕಾಂಪ್ಲೆಕ್ಸ್, ಗಾಂಧಿನಗರದಲ್ಲಿರುವ ಗುಪ್ತಾ ಮಾರುಕಟ್ಟೆ ಈಗಾಗಲೇ ಖಾಸಗಿಯವರ ಪಾಲಾಗಿದ್ದು, ಇವುಗಳನ್ನು ವಾಪಸ್ ಪಡೆಯಲು ಬಿಬಿಎಂಪಿಗೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.