ಬೆಂಗಳೂರು:ಕೇಂದ್ರ ಚುನಾವಣಾ ಆಯೋಗವು ಇತ್ತೀಚೆಗಷ್ಟೇ ವರ್ಗಾವಣೆ ನೀತಿಯನ್ನು ಪ್ರಕಟಿಸಿದೆ. ಇದರನ್ವಯ ಒಂದೇ ಜಿಲ್ಲೆಯಲ್ಲಿ ಮೂರು ವರ್ಷಗಳಿಗಿಂತ ಹೆಚ್ಚು ಕಾಲದಿಂದ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಹಾಗೂ ಚುನಾವಣೆಯೊಂದಿಗೆ ನೇರ ಸಂಪರ್ಕ ಹೊಂದಿರುವ ಅಧಿಕಾರಿಗಳು ಬೇರೆ ಜಿಲ್ಲೆಗೆ ವರ್ಗಾವಣೆ ಆಗಬೇಕಿದೆ. ಆದರೆ ರಾಜ್ಯ ಸರ್ಕಾರವು ಕುತಂತ್ರ ಮಾರ್ಗ ಅನುಸರಿಸಿ ವರ್ಗಾವಣೆ ನೀತಿಯ ಆಶಯವನ್ನೇ ಬುಡಮೇಲೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ ಎಂದು ಪೃಥ್ವಿ ರೆಡ್ಡಿ ದೂರಿದರು.
ರಾಜ್ಯ ಸರ್ಕಾರವು ಅಧಿಕಾರಿಗಳನ್ನು ಬೇರೆ ಜಿಲ್ಲೆಗೆ ತಾತ್ಕಾಲಿಕವಾಗಿ ವರ್ಗಾಯಿಸಿ ಮತ್ತೆ ಮೊದಲಿದ್ದ ಜಿಲ್ಲೆಗೆ ಮರು ವರ್ಗಾವಣೆ ಮಾಡುತ್ತಿರುವುದು ಕಂಡುಬರುತ್ತಿದೆ. ಈ ಮೂಲಕ ಅವರು ಮೂರು ವರ್ಷದಿಂದ ಒಂದೇ ಕಡೆ ಇಲ್ಲವೆಂದು ಸಾಬೀತುಪಡಿಸಿ, ಮೊದಲಿದ್ದ ಜಿಲ್ಲೆಯಲ್ಲೇ ಉಳಿಸಿಕೊಳ್ಳಲು ಸರ್ಕಾರ ಮುಂದಾಗುತ್ತಿದೆ. ಸರ್ಕಾರದ ಇಂತಹ ಕುತಂತ್ರ ಮಾರ್ಗದ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಚು.ಆಯೋಗಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.