ಬೆಂಗಳೂರು: ರಾಜ್ಯ ಸರ್ಕಾರ ಕೇವಲ 24 ಗಂಟೆಗಳ ಅಂತರದಲ್ಲಿ ಬರೋಬ್ಬರಿ 1,830 ಟೆಂಡರ್ಗಳಿಗೆ ಆಹ್ವಾನ ನೀಡಿ ಕೆಲವೇ ದಿನಗಳ ಕಾಲಾವಕಾಶ ನೀಡಿದೆ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಆರೋಪಿಸಿ ಸಂಬಂಧಪಟ್ಟ 462 ಪುಟಗಳ ದಾಖಲೆಗಳನ್ನು ಬಿಡುಗಡೆ ಮಾಡಿದರು. ಈ ಕುರಿತು ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಚೇರಿಯಲ್ಲಿ ನೆಡೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಫೆ.24ರ ಮುಂಜಾನೆ 2.30ರಿಂದ ಫೆ.25ರ ಮುಂಜಾನೆ 2.30ರ ನಡುವೆ ಕೇವಲ 24 ಗಂಟೆಯಲ್ಲಿ ಬರೋಬ್ಬರಿ 6000 ಕೋಟಿ ರೂಪಾಯಿ ಮೊತ್ತದ 1,830 ಅಲ್ಪಾವಧಿ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ.
ಒಟ್ಟು 15ರಿಂದ 20 ಸಾವಿರ ಕೋಟಿ ರೂಪಾಯಿ ಮೊತ್ತದ ವಿವಿಧ ಟೆಂಡರ್ಗಳನ್ನು ಕರೆಯಲಾಗಿದೆ ಎಂಬ ಮಾಹಿತಿಯಿದ್ದು, ಪ್ರಸ್ತುತ ನಮಗೆ 6000 ಕೋಟಿ ರೂಪಾಯಿ ಮೊತ್ತದ ಟೆಂಡರ್ಗಳ ಮಾಹಿತಿ ಮಾತ್ರ ಸಿಕ್ಕಿದೆ. ಕೇವಲ 24 ಗಂಟೆಗಳಲ್ಲಿ ದಿಢೀರ್ ಅಂತ ಈ ಅಲ್ಪಾವಧಿ ಟೆಂಡರ್ಗಳನ್ನು ಕರೆಯುವ ಅಗತ್ಯವೇನಿತ್ತು? ಕೆಲವೇ ದಿನಗಳಲ್ಲಿ ಚುನಾವಣೆ ನಡೆಯುವುದರಿಂದ ಈ ಟೆಂಡರ್ಗಳ ಹೊರೆಯು ಮುಂಬರುವ ಸರ್ಕಾರದ ಮೇಲಾಗಲಿದೆ ಎಂದರು. ಅಮಿತ್ ಶಾ ಕರ್ನಾಟಕಕ್ಕೆ ಬಂದು, ಬಿಜೆಪಿಯು ಶೇ.100ರಷ್ಟು ಭ್ರಷ್ಟಾಚಾರರಹಿತ ಆಡಳಿತ ನೀಡುತ್ತದೆ ಎಂದು ಹೇಳಿದ್ದಾರೆ. 40% ಕಮಿಷನ್ ಆಡಳಿತದ ಬದಲು 100% ಕಮಿಷನ್ ಆಡಳಿತ ಬರುತ್ತದೆ ಎಂದು ಹೇಳುವ ಬದಲು ಅವರು ಹಾಗೆ ಹೇಳಿರಬಹುದು. ರಾಜ್ಯಾದ್ಯಂತ ಸೀರೆ, ಕುಕ್ಕರ್, ಚಿನ್ನ, ಬೆಳ್ಳಿ, ಟಿವಿ ಮುಂತಾದವುಗಳನ್ನು ಮತದಾರರಿಗೆ ಹಂಚುತ್ತಿರುವುದಕ್ಕೆ ಬಿಜೆಪಿಗೆ ಹಣ ಎಲ್ಲಿಂದ ಬರುತ್ತಿದೆ ಎಂಬುದನ್ನು ಎಎಪಿ ದಾಖಲೆಸಹಿತ ಬಹಿರಂಗಪಡಿಸುತ್ತಿದೆ. ತುರ್ತು ಸಂದರ್ಭದಲ್ಲಿ ಮಾತ್ರ ಅಲ್ಪಾವಧಿ ಟೆಂಡರ್ಗಳನ್ನು ಕರೆಯಲಾಗುತ್ತದೆ. ಆದರೆ ಈಗ ಅಂತಹ ಯಾವುದೇ ಸನ್ನಿವೇಶ ಇಲ್ಲದಿದ್ದರೂ ಚುನಾವಣೆಗಾಗಿ ಜನರ ತೆರಿಗೆ ಹಣವನ್ನು ಲೂಟಿ ಮಾಡಲು ಟೆಂಡರ್ ಕರೆಯಲಾಗಿದೆ ಎಂದು ಪೃಥ್ವಿ ರೆಡ್ಡಿ ಹೇಳಿದರು.
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನ ಸೇರಿದಂತೆ ರಾಜ್ಯ ವಿವಿಧೆಡೆ ಶಿಕ್ಷಕರು, ಪೌರ ಕಾರ್ಮಿಕರು, ಆರೋಗ್ಯ ಸಿಬ್ಬಂದಿ ಮುಂತಾದವರು ನ್ಯಾಯಯುತವಾಗಿ ಬರಬೇಕಾದ ವೇತನಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರದ ಬಳಿ ಹಣವಿಲ್ಲವೆಂದು ಅವರಿಗೆಲ್ಲ ರಾಜ್ಯ ಬಿಜೆಪಿ ಸರ್ಕಾರ ಸಬೂಬು ಹೇಳುತ್ತಿದೆ. ಆದರೆ ಗುತ್ತಿಗೆ ಕಾಮಗಾರಿಗಳಿಗೆ ಟೆಂಡರ್ ಕರೆಯಲು ಮಾತ್ರ ಸರ್ಕಾರದ ಬಳಿ ಹಣ ಇದೆಯೇ? ಎಲ್ಲೆಲ್ಲಿ ಕಮಿಷನ್ ಹೊಡೆಯಲು ಅವಕಾಶವಿದೆಯೋ ಅಲ್ಲಿಗೆ ಮಾತ್ರ ಸರ್ಕಾರ ಖರ್ಚು ಮಾಡಲು ಮುಂದಾಗಿದೆ ಎಂದು ಆರೋಪಿಸಿದರು.