ಬೆಂಗಳೂರು :ಸಾರಿಗೆ ನೌಕರರ ಮುಷ್ಕರದಿಂದ ಸಾರ್ವಜನಿಕರಿಗೆ ಆಗುವ ಅನಾನುಕೂಲಗಳನ್ನು ತಡೆಗಟ್ಟುವ ನೆಪವೊಡ್ಡಿ ಸರ್ಕಾರ ಬಿಎಂಟಿಸಿಯ ಅನೇಕ ಲಾಭದಾಯಕ ಮಾರ್ಗಗಳನ್ನು ಖಾಸಗಿಯವರಿಗೆ ಹಂಚಲು ಈಗಾಗಲೇ ಪರ್ಮಿಟ್ ಅರ್ಜಿಗಳನ್ನು ಆಹ್ವಾನಿಸಿದೆ. ಇದು ಅತ್ಯಂತ ಕಳವಳಕಾರಿ ಸಂಗತಿ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಉಪಾಧ್ಯಕ್ಷ ಬಿ ಟಿ ನಾಗಣ್ಣ ಹೇಳಿದ್ದಾರೆ.
ಸಾರಿಗೆ ನೌಕರರ ಬಳಿ ಚರ್ಚಿಸದೆ ಸರ್ಕಾರ ಏಕಪಕ್ಷೀಯ ನಿರ್ಣಯ ತೆಗೆದುಕೊಂಡಿದೆ ಎಂಬುವುದು ಸಾರಿಗೆ ನೌಕರರ ಆರೋಪವಾಗಿದೆ. ನೌಕರರ ಸಂಘಗಳು ಈಗಾಗಲೇ ಸರ್ಕಾರಕ್ಕೆ ಪೂರ್ವಾನ್ವಯ ಮುಷ್ಕರ ನೋಟಿಸ್ ನೀಡಿದ್ದರೂ, ಸಾಕಷ್ಟು ಸಮಯಾವಕಾಶ ಇದ್ದರೂ, ಕರೆಸಿ ಮಾತನಾಡದೆ ಬಿಎಂಟಿಸಿಯ ಲಾಭದಾಯಕ ಮಾರ್ಗಗಳನ್ನು ಖಾಸಗಿಯವರಿಗೆ ಮಾರಲು ತಾತ್ಕಾಲಿಕ ಪರ್ಮಿಟ್ ಅರ್ಜಿಗಳನ್ನು ಆಹ್ವಾನಿಸಿದೆ.
ಇದರ ಹಿಂದೆ ಸಂಸ್ಥೆಯನ್ನು ಖಾಸಗೀಕರಣ ಮಾಡುವ ಉದ್ದೇವಿದೆ. ಮುಖ್ಯಮಂತ್ರಿ ಆದಿಯಾಗಿ ಪ್ರಭಾವಿ ಮಂತ್ರಿಗಳು ಈ ಹುನ್ನಾರಕ್ಕೆ ಕೈ ಹಾಕಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಎಂದು ನಾಗಣ್ಣ ಆರೋಪಿಸಿದರು.
ಓದಿ :ಏಪ್ರಿಲ್ 7ರಿಂದ ಸಾರಿಗೆ ಮುಷ್ಕರಕ್ಕೆ ಕರೆ: ಒಕ್ಕೂಟದ ಮುಖಂಡರಿಂದ ರಾಜ್ಯ ಪ್ರವಾಸ
ಜನ ಸಾಮಾನ್ಯನ ಸಾರಿಗೆ ಅವಶ್ಯಕತೆಗಾಗಿ ಸರ್ಕಾರಗಳು ರಿಯಾಯಿತಿ ನೀಡುವ ಮೂಲಕ ಉತ್ತೇಜನ ನೀಡಬೇಕಿರುವುದು ಸಂವಿಧಾನದ ಪ್ರಮುಖ ಆಶಯವಾಗಿದೆ. ಆದರೆ, ಸರ್ಕಾರ ಇದಕ್ಕೆ ವ್ಯತಿರಿಕ್ತವಾಗಿ ಸಾರಿಗೆ ಸಂಸ್ಥೆಗೆ ಲಾಭ ಮಾಡುವ ಉದ್ದೇಶದಿಂದ ಖಾಸಗಿಯವರಿಗೆ ಮಾರಲು ಮುಂದಾಗಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ.
ಸರ್ಕಾರದ ಈ ರೀತಿಯ ನಿಲುವುಗಳಿಂದಾಗಿ ಪರಿಸರ ಮಾಲಿನ್ಯ ನಿಯಂತ್ರಣ, ಸಂಚಾರ ನಿರ್ವಹಣೆ ಇನ್ನಿತರ ಯಾವುದೇ ಸಾರ್ಥಕ ಉದ್ದೇಶಗಳು ಈಡೇರುವುದಿಲ್ಲ. ಪ್ರತಿದಿನ 4.5 ಕೋಟಿಗೂ ಹೆಚ್ಚು ರೂ. ಲಾಭ ತರುತ್ತಿರುವ ಮಾರ್ಗಗಳಿಗೆ ತಾತ್ಕಾಲಿಕ ಪರ್ಮಿಟ್ ನೀಡುವ ಮೂಲಕ ಖಾಸಗಿಯವರಿಗೆ ಒಪ್ಪಿಸುತ್ತಿರುವುದನ್ನು ಆಮ್ ಆದ್ಮಿ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದರು.
ಆಪ್ ವಕ್ತಾರ ಶರತ್ ಖಾದ್ರಿ ಮಾತನಾಡಿ, ಸಂಸದ ತೇಜಸ್ವಿ ಸೂರ್ಯ ಬಿಎಂಟಿಸಿಯನ್ನು ಖಾಸಗೀಕರಣಗೊಳಿಸಿ ಮುಚ್ಚಿ ಹಾಕುವ ಹೇಳಿಕೆಗೆ ಸರ್ಕಾರದ ಈ ನಡೆ ಮತ್ತಷ್ಟು ಪುಷ್ಠಿ ನೀಡುತ್ತಿದೆ. ಥಾಣೆ , ನವಿ ಮುಂಬೈ, ಬಾಂಬೆ ಮುನ್ಸಿಪಲ್ ಕಾರ್ಪೊರೇಶನ್ಗಳು ಸಾರಿಗೆ ವ್ಯವಸ್ಥೆಯನ್ನು ನಿರ್ವಹಣೆ ಮಾಡುತ್ತಿರುವ ರೀತಿಯೇ ಸರ್ಕಾರ ಬಿಎಂಟಿಸಿಯನ್ನು ಬಿಬಿಎಂಪಿಗೆ ಒಪ್ಪಿಸುವುದು ಸೂಕ್ತ ಎಂದು ಹೇಳಿದರು.