ಬೆಂಗಳೂರು : "ಸೌದೆಗಾದ್ರೂ ಸಬ್ಸಿಡಿ ಕೊಡು ಗುರು" ಎನ್ನುವ ಘೋಷವಾಕ್ಯಗಳನ್ನು ಕೂಗುತ್ತಾ ಆಮ್ ಆದ್ಮಿ ಪಕ್ಷದ ಮಹಿಳಾ ಘಟಕದ ಕಾರ್ಯಕರ್ತರು ಪ್ರತಿಭಟನೆ ಮಾಡಿದರು. ಇಂದು ಮೌರ್ಯ ಸರ್ಕಲ್ ಬಳಿ ಸೇರಿದ ಕಾರ್ಯಕರ್ತರು, ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳ ಮಾಡಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ದ ಸೌದೆ ಒಲೆಯಲ್ಲಿ ಟೀ ಮಾಡಿ ಹಂಚುವ ಮೂಲಕ ಪ್ರತಿಭಟನೆ ನಡೆಸಿದರು.
ಮಹಿಳಾ ಘಟಕದ ಅಧ್ಯಕ್ಷೆ ಕುಶಲ ಸ್ವಾಮಿ ಮಾತನಾಡಿ, ಡಿಸೆಂಬರ್ ತಿಂಗಳೊಂದರಲ್ಲೇ ಎರಡು ಬಾರಿ ಎಲ್‌ಪಿಜಿ ಸಿಲಿಂಡರ್ ದರವನ್ನು 100 ರೂಪಾಯಿಯಷ್ಟು ಹೆಚ್ಚಳ ಮಾಡಿ ಜನರನ್ನು ಸುಲಿಗೆ ಮಾಡುತ್ತಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನಸಾಮಾನ್ಯರನ್ನು ದೋಚುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಲಾಕ್‌ಡೌನ್ ನೆಪ ಮಾಡಿಕೊಂಡು ಸಬ್ಸಿಡಿ ನೀಡುವುದನ್ನು ನಿಲ್ಲಿಸಿರುವ ಸರ್ಕಾರ, ನೇರವಾಗಿ 20 ಸಾವಿರ ಕೋಟಿ ಉಳಿತಾಯ ಮಾಡಿದೆ. ಆದರೂ ಬೆಲೆ ಹೆಚ್ಚಳ ಏಕೆ? ಮಾರುಕಟ್ಟೆಯಲ್ಲಿ ಸೌದೆಯ ಬೆಲೆಯೂ ಗಗನಕ್ಕೆ ಏರಿದೆ. ಆದ ಕಾರಣ "ಸೌದೆಗಾದರೂ ಸಬ್ಸಿಡಿ ಕೊಡಿ" ಕನಿಷ್ಠ ಪಕ್ಷ ಎರಡು ಹೊತ್ತು ಊಟ ಮಾಡಿ ಜೀವ ಉಳಿಸಿಕೊಳ್ಳುತ್ತೇವೆ ಎಂದು ವ್ಯಂಗ್ಯವಾಡಿದರು.