ಬೆಂಗಳೂರು: ಟ್ಯಾಂಕರ್ ಮಾಫಿಯಾಗೆ ಜನರ ಹಣವನ್ನು ಅಡವಿಟ್ಟಿರುವ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ 110 ಹಳ್ಳಿಗಳ ಜನರ ಬದುಕನ್ನು ಮೂರಾಬಟ್ಟೆ ಮಾಡಿದೆ. ಬಿಬಿಎಂಪಿ ವ್ಯಾಪ್ತಿಗೆ 110 ಹಳ್ಳಿಗಳು ಸೇರ್ಪಡೆಗೊಂಡು 13 ವರ್ಷಗಳು ಕಳೆಯುತ್ತಾ ಬಂದರೂ ಸರಿಯಾದ ಮೂಲ ಸೌಕರ್ಯಗಳು ನೀಡದೆ ಹಫ್ತಾ ವಸೂಲಿ ಮಾಡುವ ಪುಡಿ ರೌಡಿಗಳಂತೆ ವರ್ತಿಸುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಹ ಸಂಚಾಲಕಿ ಶಾಂತಲಾ ದಾಮ್ಲೆ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಸವಲತ್ತುಗಳನ್ನು ನೀಡದೆ ಜನರಿಂದ ಮಾತ್ರ ಹಣ ವಸೂಲಿ ಮಾಡುತ್ತಿರುವ ಸರ್ಕಾರ ಈ ಹಳ್ಳಿಗಳ ಕಡೆ ತಿರುಗಿಯೂ ನೋಡಿಲ್ಲ. ಸುಮಾರು 12 ಲಕ್ಷ ಜನಸಂಖ್ಯೆ ಹೊಂದಿರುವ ಈ ಹಳ್ಳಿಗಳ ಅಭಿವೃದ್ಧಿಗೆ ಎಂದು ಈ ಮೊದಲು ಚದರ ಅಡಿಗೆ 150 ಶುಲ್ಕ ವಿಧಿಸಲಾಗುತ್ತಿತ್ತು ಈಗ ಅದನ್ನು 400 ರೂಗಳಿಗೆ ಹೆಚ್ಚಿಸಿ ಸರ್ಕಾರವೇ ಜನರ ಲೂಟಿ ಮಾಡುತ್ತಿದೆ ಎಂದು ಆರೋಪಿಸಿದರು.
ಇಷ್ಟೆಲ್ಲಾ ಹಫ್ತಾ ವಸೂಲಿ ಮಾಡುತ್ತಿರುವ ಸರ್ಕಾರ ಇದುವರೆಗೂ ಕನಿಷ್ಠ ಸೌಲಭ್ಯವಾದ ನೀರನ್ನೂ ಸಹ ಸರಿಯಾಗಿ ನೀಡಿಲ್ಲ. ಕಾವೇರಿ ನೀರು, ಉತ್ತಮ ಒಳ ಚರಂಡಿ ವ್ಯವಸ್ಥೆಗೆ ಎಂದು ಇದುವರೆಗು 5400 ಕೋಟಿ ಖರ್ಚು ಮಾಡಲಾಗಿದೆ ಈ ಹಣ ಎಲ್ಲಿ ಹೋಗಿದೆ ಎಂದು ಪ್ರಶ್ನಿಸಿದರು.
ಈ ನೀರಿನ ಟ್ಯಾಂಕರ್ ಮಾಫಿಯಾ ವರ್ಷಕ್ಕೆ 150 ಕೋಟಿಗೂ ಹೆಚ್ಚಿನ ವ್ಯವಹಾರವಾಗಿದ್ದು ಈ ಹಣ ರಾಜಕಾರಣಿಗಳ ಸ್ಥಳೀಯ ಪುಡಾರಿಗಳ ಜೇಬು ಸೇರುತ್ತಿರುವುದರಿಂದ ಯಾರೂ ಈ ಸಮಸ್ಯೆ ಬಗ್ಗೆ ಮಾತನಾಡುತ್ತಿಲ್ಲ. ಒಂದು ಕುಟುಂಬ ಪ್ರತಿ ವರ್ಷ 20 ಸಾವಿರದಿಂದ 55 ಸಾವಿರದ ತನಕ ನೀರು ಹಾಗೂ ಒಳ ಚರಂಡಿ ವ್ಯವಸ್ಥೆ ದುರಸ್ಥಿಗೆ ಖರ್ಚು ಮಾಡುತ್ತಿದ್ದಾನೆ, ಈ ಹಣವೆಲ್ಲ ಸ್ಥಳೀಯ ಪುಡಾರಿಗಳ ಜೇಬು ತುಂಬಿಸುತ್ತಿದೆ. ಇವರಿಂದ ಸರ್ಕಾರ ಹಫ್ತಾ ವಸೂಲಿ ಮಾಡುತ್ತಿದೆ ಎಂದು ದೂರಿದರು.