ಬೆಂಗಳೂರು:ಗುಂಡು ಹಾಕಿದ ಕಾಂಗ್ರೆಸ್ ಹಾಗೂ ಕೊಂದು ಹಾಕುವ ಬಿಜೆಪಿಯನ್ನು ಜನ ನಂಬಲು ಸಾಧ್ಯವಿಲ್ಲ. ಹೀಗಾಗಿ ನಾವು ದೃಢ ನಿರ್ಧಾರ ಕೈಗೊಳ್ಳುವ ಸಮಯ ಎದುರಾಗಿದೆ ಎಂದು ರಾಜ್ಯ ರೈತ ಸಂಘ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು. ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಬೃಹತ್ ರೈತ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶದ ಯಾವುದೇ ಪ್ರಾದೇಶಿಕ ಪಕ್ಷವೂ ಭ್ರಷ್ಟಾಚಾರರಹಿತ ಆಡಳಿತ ನೀಡುತ್ತಿಲ್ಲ. ಈ ಸಂದರ್ಭದಲ್ಲಿ ಇಡೀ ದೇಶಕ್ಕೆ ಮಾದರಿ ಅರವಿಂದ ಕೇಜ್ರಿವಾಲ್. ಭ್ರಷ್ಟಾಚಾರದ ಅಂತಿಮ ಘಟ್ಟ ರಾಜ್ಯದಲ್ಲಿದೆ. ರಾಜ್ಯದಲ್ಲಿ ಮೂರು ರಾಜಕೀಯ ಪಕ್ಷಕ್ಕೆ ಪರ್ಯಾಯವಾಗಿ ಒಂದು ಪಕ್ಷ ಸರ್ಕಾರ ರಚಿಸಬೇಕು. ಹೀಗಾಗಿ ರಾಜ್ಯ ರೈತ ಸಂಘ 2023 ರ ಚುನಾವಣೆಯಲ್ಲಿ ಆಮ್ ಆದ್ಮಿ ಜತೆ ಕೈಜೋಡಿಸಿ ವಿಧಾನಸಭೆ ಪ್ರವೇಶಿಸಬೇಕು. ನಾವ್ಯಾರೂ ಕಳ್ಳರಲ್ಲ, ದುಡಿಯುವವರು, ಅನ್ನ ನೀಡುವವರು. ತೆರಿಗೆಯನ್ನು ಪ್ರಾಮಾಣಿಕವಾಗಿ ಕಟ್ಟುತ್ತೇವೆ. ಆದರೆ, ನಾವು ಮಾತ್ರ ಬಿಕಾರಿಗಳಂತೆ ಬಾಳಬೇಕಾ? ಎಂದು ಪ್ರಶ್ನಿಸಿದರು.