ಬೆಂಗಳೂರು:ದೇಶದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಪಕ್ಷ ಆಮ್ ಆದ್ಮಿ ಪಕ್ಷ. ಕಳೆದ 10 ವರ್ಷದಿಂದ ದೆಹಲಿಯಲ್ಲಿ ಪಕ್ಷವನ್ನು ಸೋಲಿಸಲು ಬಿಜೆಪಿ ಪ್ರಯತ್ನಿಸಿ, ವಿಫಲವಾಗಿದೆ. ಅಲ್ಲಿನ ಜನ ಅರವಿಂದ್ ಕೇಜ್ರಿವಾಲ್ ಅವರನ್ನು ನಾಯಕ ಎಂದು ಒಪ್ಪಿಕೊಂಡಿರುವುದಾಗಿ ದೆಹಲಿ ಶಾಸಕ, ಕರ್ನಾಟಕ ರಾಜ್ಯ ಉಸ್ತುವಾರಿ ದಿಲೀಪ್ ಪಾಂಡೆ ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷ ಸಂಸ್ಥಾಪನಾ ದಿನಾಚರಣೆ ಆಮ್ ಆದ್ಮಿ ಪಕ್ಷ ಸ್ಥಾಪನೆಯಾಗಿ 11 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಜಯನಗರದ ಎಂಇಎಸ್ ಮೈದಾನದಲ್ಲಿ ಸಂಸ್ಥಾಪನಾ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಈ ಸಭೆಯಲ್ಲಿ ಭಾಗವಹಿಸಿ ದೆಹಲಿ ಮುಖ್ಯ ಸಚೇತಕ ಹಾಗೂ ಕರ್ನಾಟಕ ರಾಜ್ಯ ಉಸ್ತುವಾರಿ ದಿಲೀಪ್ ಪಾಂಡೆ ಮಾತನಾಡಿ, ಬಿಜೆಪಿ ಎಲ್ಲಾ ಬಲವನ್ನು ಬಳಸಿಯೂ ಆಮ್ ಆದ್ಮಿ ಪಕ್ಷವನ್ನು ಸೋಲಿಸಲು ಆಗಿಲ್ಲ ಎಂದರು.
ಜನಜೀವನವನ್ನು ಸುಧಾರಿಸಲು ಪಕ್ಷ ಕೆಲಸ ಮಾಡಿದೆ. ವಿದ್ಯುತ್, ಆರೋಗ್ಯ, ಸಾರಿಗೆ, ಶಿಕ್ಷಣದ ಬಗ್ಗೆ ನೀಡಿದ್ಧ ಭರವಸೆಗಳನ್ನು ಈಡೇರಿಸಲಾಗಿದೆ. ಕರ್ನಾಟಕದಲ್ಲೂ ಪಕ್ಷಕ್ಕೆ ಉತ್ತಮ ಭವಿಷ್ಯವಿದೆ, ಅದಕ್ಕೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಎಎಪಿ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಪೃಥ್ವಿ ರೆಡ್ಡಿ ಎಎಪಿ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಪೃಥ್ವಿ ರೆಡ್ಡಿ ಮಾತನಾಡಿ, ಆಮ್ ಆದ್ಮಿ ಪಕ್ಷದ ಕಾರ್ಯಕರ್ತರಿಗೆಲ್ಲ ಭಾನುವಾರ ಹುಟ್ಟುಹಬ್ಬದ ದಿನ. ಹನ್ನೊಂದು ವರ್ಷದಲ್ಲೇ ಪಕ್ಷ ರಾಷ್ಟ್ರೀಯ ಪಕ್ಷವಾಗಿ ಬೆಳೆದಿದೆ. ಇದಕ್ಕೆ ಪಕ್ಷದ ಕಾರ್ಯಕರ್ತರು ಕಾರಣ. ಮೊದಲ ಚುನಾವಣೆಯಲ್ಲಿ ಸರ್ಕಾರಿ ಟೀಚರ್ ಮಗಳಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿದ್ದೇವೆ. ಜನಸಾಮಾನ್ಯರ ನೋವು, ಸಾಮಾನ್ಯರಿಗೆ ಮಾತ್ರ ಅರ್ಥ ಆಗೋದು. ಕರ್ನಾಟಕದಲ್ಲಿ ಹಣ, ಧರ್ಮ ಇಲ್ಲದೆ ರಾಜಕೀಯ ಮಾಡಕ್ಕಾಗಲ್ಲ ಎನ್ನುತ್ತಾರೆ, ಆದರೆ ನಾವು ಇಲ್ಲಿ ರಾಜಕೀಯ ಮಾಡಲು ಬಂದಿಲ್ಲ, ಬದಲಾವಣೆ ಮಾಡಲು ಬಂದಿದ್ದೇವೆ ಎಂದರು.
ಮುಂದುವರೆದು ಮಾತನಾಡಿದ ಅವರು, ಆಮ್ ಆದ್ಮಿ ಪಕ್ಷ ಹುಟ್ಟಿದ್ದು ಬೆಂಗಳೂರಿನಲ್ಲೇ. ಅಂದು ನಾಯಕರು ಬೆಂಗಳೂರಿನ ಜಿಂದಾಲ್ ನೇಚರ್ ಕೇರ್‌ನಲ್ಲಿ ಪಕ್ಷ ಕಟ್ಟುವ ಬಗ್ಗೆ ಚರ್ಚೆ ನಡೆದಿದ್ದು, ಅರವಿಂದ್ ಕೇಜ್ರಿವಾಲ್, ಜಸ್ಟಿಸ್ ಹೆಗಡೆಯವರು ಚರ್ಚಿಸಿದ್ದರು. ಕರ್ನಾಟಕದಲ್ಲಿ ಒಂದು ಸ್ಥಾನವನ್ನೂ ಗೆಲ್ಲದಿದ್ದರೂ ಜನಸಾಮಾನ್ಯರಿಗೆ ತೊಂದರೆಯಾದಾಗ ದನಿ ಎತ್ತಿದ್ದು ಆಮ್ ಆದ್ಮಿ ಪಕ್ಷ. ರಾಜ್ಯದಲ್ಲಿ ಶಾಲೆಗಳು, ಆಸ್ಪತ್ರೆಗಳ ಪರಿಸ್ಥಿತಿ ಹೇಗಿದೆ ಎಂದು ಎಲ್ಲರಿಗೂ ಗೊತ್ತಿದೆ, ಬದಲಾವಣೆ ತರಲು ಕೆಲಸ ಆರಂಭವಾಗಿದೆ ಎಂದು ಹೇಳಿದರು.
ಎಎಪಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಕನ್ನಡ ಕೂಡ ರಾಷ್ಟ್ರ ಭಾಷೆ-ಮುಖ್ಯಮಂತ್ರಿ ಚಂದ್ರು:ಆಮ್ ಆದ್ಮಿ ಪಕ್ಷ ಇಡೀ ದೇಶವನ್ನು ಆವರಿಸಿಕೊಳ್ಳಲಿದೆ. ದೇಶದಲ್ಲಿ ಏಕವ್ಯಕ್ತಿ ಸರ್ಕಾರವನ್ನು ನೋಡಲಾಗಿದೆ. ದಕ್ಷಿಣ ಕರ್ನಾಟಕದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಭದ್ರ ತಳಪಾಯ ಹಾಕಲಾಗಿದೆ. ನಾವು ಮುನ್ನುಗ್ಗಬೇಕಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಎಪಿ ಕರ್ನಾಟಕ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ, ರಾಜ್ಯ ಸಮೂಹನ ಮುಖ್ಯಸ್ಥ ಬ್ರಿಜೇಶ್ ಕಾಳಪ್ಪ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಕುಶಲಾ ಸ್ವಾಮಿ, ಬೆಂಗಳೂರು ನಗರ ಘಟಕದ ಅಧ್ಯಕ್ಷ ಡಾ. ಸತೀಶ್, ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ವೀಣಾ, ಸುಷ್ಮಾ .ವಿ., ಜಗದೀಶ್ ಚಂದ್ರ, ಅಶೋಕ್ ಮೃತ್ಯುಂಜಯ ಹಾಗೂ ಪಕ್ಷದ ಅನೇಕ ಪ್ರಮುಖ ನಾಯಕರು, ಕಾರ್ಯಕರ್ತರು ಹಾಗೂ ಬೆಂಬಲಿಗರು ಭಾಗವಹಿಸಿದ್ದರು.
ಇದನ್ನೂ ಓದಿ:ಆಮ್ ಆದ್ಮಿ ಪಕ್ಷಕ್ಕೆ 11 ವರ್ಷ; ಬೆಂಗಳೂರಿನಲ್ಲಿ ಅದ್ಧೂರಿ ಕಾರ್ಯಕ್ರಮ - ನಗರ ಅಧ್ಯಕ್ಷ ಡಾ. ಸತೀಶ್