ಬೆಂಗಳೂರು: ಲಾಕ್ಡೌನ್ನಿಂದ ಸಾವಿರಾರು ವಕೀಲರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಅವರಿಗೆ ನೆರವು ನೀಡಲು ಕ್ರಮ ಕೈಗೊಳ್ಳಿ ಎಂದು ಬೆಂಗಳೂರು ವಕೀಲರ ಸಂಘ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಪತ್ರ ಬರೆದಿದೆ.
ಪತ್ರ ಬರೆದಿರುವ ಬೆಂಗಳೂರು ವಕೀಲರ ಸಂಘ, ವಕೀಲಿ ವೃತ್ತಿಯಿಂದ ಸಿಗುವ ದೈನಂದಿನ ಸಂಪಾದನೆಯನ್ನೇ ನಂಬಿಕೊಂಡಿದ್ದ ವಕೀಲರು ಕೋರ್ಟ್ಗಳನ್ನು ಮುಚ್ಚಿದ ಬಳಿಕ ನಿತ್ಯದ ಮೂರು ಹೊತ್ತಿನ ಊಟಕ್ಕೂ ಪರಿತಪಿಸುತ್ತಿದ್ದಾರೆ. ಇದರಿಂದಾಗಿಯೇ ನಗರದಲ್ಲಿ ವಕೀಲರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರು ವಕೀಲರ ಸಂಘದಿಂದ ಆರ್ಥಿಕ ಸಂಕಷ್ಟದಲ್ಲಿರುವ 700 ವಕೀಲರಿಗೆ ತಲಾ 5 ಸಾವಿರದಂತೆ ನೆರವು ನೀಡಿದ್ದೇವಾದರೂ ಸಮಸ್ಯೆ ಕಡಿಮೆಯಾಗಿಲ್ಲ. ಹೀಗಾಗಿ ವಕೀಲರ ಸಮಸ್ಯೆಗಳಿಗೆ ಸ್ಪಂದಿಸುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಮನವಿ ಮಾಡಿದ್ದರೂ ಕೂಡಾ ಈವರೆಗೆ ಆರ್ಥಿಕ ನೆರವು ಸಿಕ್ಕಿಲ್ಲ.