ಬೆಂಗಳೂರು: ರಾಜ್ಯದಲ್ಲಿ ಲಾಕ್‌ಡೌನ್ ಜಾರಿ ಮಾಡಿದಾಗಿನಿಂದ ವಕೀಲರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಆದಷ್ಟು ಬೇಗ ರಾಜ್ಯದ ಎಲ್ಲಾ ನ್ಯಾಯಾಲಯಗಳನ್ನು ಪೂರ್ಣ ಪ್ರಮಾಣದಲ್ಲಿ ನಡೆಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬೆಂಗಳೂರು ವಕೀಲರ ಸಂಘ(ಎಎಬಿ) ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದೆ.
ಸಂಘದ ಅಧ್ಯಕ್ಷರಾದ ಎ ಪಿ ರಂಗನಾಥ್, ಪ್ರಧಾನ ಕಾರ್ಯದರ್ಶಿ ಎನ್ ಗಂಗಾಧರಯ್ಯ ಹಾಗೂ ಖಜಾಂಚಿ ಶಿವಮೂರ್ತಿ ಅವರು ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಪತ್ರದಲ್ಲಿ ವಕೀಲರ ಸಂಕಷ್ಟಗಳನ್ನು ವಿವರಿಸಿದ್ದು, ಆದಷ್ಟು ಬೇಗ ಹೈಕೋರ್ಟ್‌ನ ಎಲ್ಲಾ ಪೀಠಗಳು, ಜಿಲ್ಲಾ ನ್ಯಾಯಾಲಯಗಳು ಹಾಗೂ ತಾಲೂಕು ನ್ಯಾಯಾಲಯಗಳನ್ನು ಪೂರ್ಣ ಪ್ರಮಾಣದಲ್ಲಿ ನಡೆಸಲು ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದಾರೆ.
ದಿನನಿತ್ಯದ ಸಂಪಾದನೆ ನಂಬಿ ಜೀವನ ಮಾಡುತ್ತಿದ್ದ ಅತಿ ಹೆಚ್ಚು ವಕೀಲರು ಕಳೆದ ನಾಲ್ಕೈದು ತಿಂಗಳಿನಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ದಿನನಿತ್ಯದ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದೇ ಕಷ್ಟವಾಗಿದೆ. ಕೊರೊನಾ ಸೋಂಕಿನಿಂದ ದೂರ ಉಳಿದು ಆರೋಗ್ಯ ಕಾಪಾಡಿಕೊಳ್ಳುವುದಕ್ಕಿಂತ ಮೊದಲು ಹೊಟ್ಟೆಪಾಡು ನಡೆಸುವುದಕ್ಕೆ ಪ್ರಾಶಸ್ತ್ಯ ನೀಡುವಷ್ಟು ವಕೀಲರ ಬದುಕು ದುಸ್ತರವಾಗಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಹೈಕೋರ್ಟ್ ಸೇರಿ ರಾಜ್ಯದೆಲ್ಲೆಡೆ ನ್ಯಾಯಾಲಯಗಳ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವ ಕುರಿತು ವಿವರಿಸಿ, ವಕೀಲರಿಗೆ ತಾಳ್ಮೆಯಿಂದ ಸಹಕಾರ ನೀಡುವಂತೆ ತಾವು(ಸಿಜೆ) ಮನವಿ ಮಾಡಿದ್ದೀರಿ. ಸಂಕಷ್ಟದ ಕಾಲದಲ್ಲೂ ಕೋರ್ಟ್ ನಿರ್ವಹಣೆ ಮಾಡುತ್ತಿರುವ ನಿಮ್ಮ ಉದಾತ್ತ ನಾಯಕತ್ವವನ್ನು ಮತ್ತು ನಿಮ್ಮ ಮನವಿಯನ್ನು ವಕೀಲ ಸಮುದಾಯ ಅರ್ಥೈಸಿಕೊಂಡಿದೆ. ಆದರೆ, ವಕೀಲರಿಗೆ ಜೀವನೋಪಾಯಕ್ಕೆ ವೃತ್ತಿ ಬಿಟ್ಟು ಬೇರೆ ಆಯ್ಕೆಗಳಿಲ್ಲ. ಹೀಗಾಗಿ, ರಾಜ್ಯದ ಎಲ್ಲಾ ಕೋರ್ಟ್‌ಗಳನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸಿಲು ಮತ್ತು ಡಿಜಿಟಲ್ ಮತ್ತು ಫಿಸಿಕಲ್ ಕೋರ್ಟ್ ಕಲಾಪಗಳನ್ನು ಹೆಚ್ಚೆಚ್ಚು ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಸಂಘ ಮನವಿ ಮಾಡಿದೆ.