ಬೆಂಗಳೂರು :ವಕೀಲಿ ವೃತ್ತಿ ಗೌರವಕ್ಕೆ ಚ್ಯುತಿ ಉಂಟು ಮಾಡಿರುವ ಆರೋಪ ಸಂಬಂಧ ವಕೀಲರಾದ ಜಗದೀಶ್ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ ತಿಳಿಸಿದ್ದಾರೆ.
ನಗರದ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ನಿನ್ನೆ ಬೆಳಗ್ಗೆ ನಡೆದ ಘಟನೆಗೆ ಸಂಬಂಧಿಸಿದಂತೆ ಎಲ್ಲ ಮಾಹಿತಿಗಳನ್ನು ಪಡೆದುಕೊಂಡಿದ್ದೇವೆ. ವೃತ್ತಿ ಗೌರವಕ್ಕೆ ಧಕ್ಕೆ ತಂದಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಜರುಗಿಸಲು ದೆಹಲಿ ಬಾರ್ ಕೌನ್ಸಿಲ್ ಜತೆ ಚರ್ಚಿಸುತ್ತೇವೆ ಎಂದು ಎಎಬಿ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ.
ಮತ್ತೊಂದೆಡೆ ನ್ಯಾಯಾಲಯದ ಆವರಣದಲ್ಲಿ ನಡೆದ ಘಟನೆ ಕುರಿತು ಸಿಟಿ ಸಿವಿಲ್ ಕೋರ್ಟ್ ರಿಜಿಸ್ಟ್ರಾರ್ ಹೈಕೋರ್ಟ್ಗೆ ವರದಿ ಸಲ್ಲಿಸಿದ್ದಾರೆ. ಮಾನನಷ್ಟ ಪ್ರಕರಣವೊಂದರ ವಿಚಾರಣೆಯು ಫೆ.10ರಂದು ಸಿಸಿಹೆಚ್ 61ರಲ್ಲಿ ನಿಗದಿಯಾಗಿತ್ತು. ಆ ದಿನ ವಕೀಲ ಜಗದೀಶ್ ನ್ಯಾಯಾಲಯಕ್ಕೆ ಹಾಜರಾಗುವ ವೇಳೆಗೆ ಕೇಸ್ ಅಡ್ಜರ್ನ್ ಆಗಿತ್ತು.
ಇದಕ್ಕೆ ಜಗದೀಶ್ ಅವರು ಅಸಮಾಧಾನಗೊಂಡಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕಾಗಿ ಜಗದೀಶ್ ಅವರು ನ್ಯಾಯಾಲಯದ ರಿಜಿಸ್ಟ್ರಾರ್ ಜೊತೆಗೆ ಆಕ್ರೋಶಭರಿತರಾಗಿ ಮಾತನಾಡಿದ್ದಾರೆ ಎನ್ನಲಾಗಿದೆ. ನ್ಯಾಯಾಲಯದ ಆವರಣದಲ್ಲಿ ಅಹಿತಕರ ವಾತಾವರಣ ಸೃಷ್ಟಿಯಾಗಲು ಕಾರಣರಾಗಿದ್ದಾರೆ ಎಂದು ಹೈಕೋರ್ಟ್ಗೆ ಸಲ್ಲಿಸಿರುವ ವರದಿಯಲ್ಲಿ ಹೇಳಲಾಗಿದೆ.
ಎಎಬಿ ಅಧ್ಯಕ್ಷರ ಸ್ಪಷ್ಟನೆ :ನ್ಯಾಯಾಲಯದ ಆವರಣದಲ್ಲಿ ಅಹಿತಕರ ಬೆಳವಣಿಗೆಗೆ ಕಾರಣರಾದವರ ವಿರುದ್ಧ ಖಂಡಿತವಾಗಿ ಕ್ರಮ ಜರುಗಿಸುತ್ತೇವೆ. ಗದ್ದಲಕ್ಕೆ ಕಾರಣವಾಗಿದ್ದಾರೆ ಎನ್ನಲಾದ ವಕೀಲರ ವಿರುದ್ಧ ಕ್ರಮ ಜರುಗಿಸಲು ದೆಹಲಿ ಬಾರ್ ಕೌನ್ಸಿಲ್‌ನೊಂದಿಗೆ ಚರ್ಚಿಸುವುದು ಸೇರಿದಂತೆ ಇತರೆ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಎಎಬಿ ಅಧ್ಯಕ್ಷ ವಿವೇಕ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಎಫ್ಐಆರ್ ದಾಖಲಿಸಿದ ಜಗದೀಶ್ ಸ್ನೇಹಿತ :ಬೆಳಗ್ಗೆ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ನಡೆದ ಗಲಾಟೆಯಲ್ಲಿ ವಕೀಲ ಜಗದೀಶ್ ಹಾಗೂ ಅವರ ಪುತ್ರನ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ. ಈ ಕುರಿತಂತೆ ಜಗದೀಶ್ ಸ್ನೇಹಿತ ಶರತ್ ಖಾದ್ರಿ ಎಂಬುವರು ನಿನ್ನೆ ಸಂಜೆ ಹಲಸೂರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಸೂಕ್ತ ಕ್ರಮ ಜರುಗಿಸಬೇಕು ಎಂದು ಕೋರಿದ್ದು, ದೂರಿನ ಮೇರೆಗೆ ಪೊಲೀಸರು ಐಪಿಸಿ ಸೆಕ್ಷನ್ 143, 147, 149 ಹಾಗೂ 323 ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.