ಬೆಂಗಳೂರು :ರಾಜ್ಯದ ವಕೀಲರ ರಕ್ಷಣೆಗಾಗಿ ಸಿದ್ದಪಡಿಸಿರುವ 'ಕರ್ನಾಟಕ ವಕೀಲರ (ದೌರ್ಜನ್ಯ ತಡೆ ಮತ್ತು ರಕ್ಷಣೆ) ಮಸೂದೆ -2021' ಅನ್ನು ಬೆಂಗಳೂರು ವಕೀಲರ ಸಂಘ (ಎಎಬಿ) ಇಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಿಗೆ ಸಲ್ಲಿಸಿದ್ದು, ಮಸೂದೆಯನ್ನು ಸುಗ್ರೀವಾಜ್ಞೆ ಮೂಲಕ ತುರ್ತಾಗಿ ಜಾರಿಗೊಳಿಸುವಂತೆ ಮನವಿ ಮಾಡಿದೆ.
ರಾಜ್ಯದಲ್ಲಿ ವಕೀಲರ ರಕ್ಷಣೆಗಾಗಿ ಕಾಯ್ದೆಯೊಂದನ್ನು ರೂಪಿಸಿ ಜಾರಿಗೊಳಿಸುವ ಕುರಿತು ಸಾಕಷ್ಟು ಒತ್ತಾಯ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಎಎಬಿ ಕಳೆದ ಮಾ.1ರಂದು ನಡೆದ ವಿಶೇಷ ಸರ್ವ ಸದಸ್ಯರ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಮಸೂದೆ ರೂಪಿಸಲು ಹಿರಿಯ ವಕೀಲರಾದ ಉದಯ್ ಹೊಳ್ಳ, ಸಿ.ಹೆಚ್ ಹನುಮಂತರಾಯ, ಎ.ಎಸ್ ಪೊನ್ನಣ್ಣ ಹಾಗೂ ಡಿ.ಆರ್ ರವಿಶಂಕರ್ ಅವರನ್ನು ಒಳಗೊಂಡ ಸಮಿತಿ ರಚಿಸಿ ಕೋರಿಕೆ ಸಲ್ಲಿಸಿತ್ತು.
ಇದೀಗ ಸಮಿತಿ 'ಕರ್ನಾಟಕ ವಕೀಲರ(ದೌರ್ಜನ್ಯ ತಡೆ ಮತ್ತು ರಕ್ಷಣೆ)ಮಸೂದೆ-2021' ಸಿದ್ದಪಡಿಸಿ ಸಂಘಕ್ಕೆ ಸಲ್ಲಿಸಿದೆ. ಈ ಮಸೂದೆಯನ್ನು ಇಂದು ಗೃಹ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಿರುವ ಎಎಬಿ, ಮಸೂದೆಯನ್ನು ಸುಗ್ರೀವಾಜ್ಞೆ ಮೂಲಕ ತುರ್ತಾಗಿ ಜಾರಿಗೊಳಿಸಲು ಮನವಿ ಮಾಡಿದೆ.
ಮಸೂದೆಯ ಮುಖ್ಯಾಂಶಗಳು :
12 ಪುಟಗಳ 12 ಸೆಕ್ಷನ್ಗಳುಳ್ಳ ಮಸೂದೆಯಲ್ಲಿ ವಕೀಲರ ರಕ್ಷಣೆಗೆ ಕಾಯ್ದೆ ರೂಪಿಸುವ ಅನಿವಾರ್ಯತೆಗಳು ಹಾಗೂ ಮೂಲ ಕಾರಣಗಳನ್ನು ಉಲ್ಲೇಖಿಸಲಾಗಿದೆ.
- ವಕೀಲರು/ಕಾನೂನು ವೃತ್ತಿಪರರು ಮುಕ್ತವಾಗಿ ಮತ್ತು ನಿರ್ಭೀತವಾಗಿ ತಮ್ಮ ಕರ್ತವ್ಯ ನಿರ್ವಹಿಲು ಯಾವುದೇ ವ್ಯಕ್ತಿ ಅಡ್ಡಿ ಉಂಟು ಮಾಡುವುದು, ಬೆದರಿಕೆ ಹಾಕುವುದು, ಕಿರುಕುಳ ನೀಡುವುದು, ದಬ್ಬಾಳಿಕೆ ಮಾಡುವುದು, ಅಸೂಯೆಯಿಂದ ಪ್ರಾಸಿಕ್ಯೂಷನ್ಗೆ ಒಳಪಡಿಸಲು ಯತ್ನಿಸುವುದು ಸೇರಿದಂತೆ ಯಾವುದೇ ರೀತಿಯಲ್ಲಿ ಕೋರ್ಟ್‌ನೊಳಗೆ ಅಥವಾ ಹೊರಗೆ ತೊಂದರೆ ಉಂಟು ಮಾಡುವುದು ದೌರ್ಜನ್ಯ ಎನ್ನಿಸಿಕೊಳ್ಳಲಿದೆ. ಹಾಗೆಯೇ, ವಕೀಲರ ಕುಟುಂಬ ಸದಸ್ಯರಿಗೆ ತೊಂದರೆ ಉಂಟು ಮಾಡುವುದು, ಆಸ್ತಿಗೆ ನಷ್ಟ ಉಂಟು ಮಾಡುವುದು, ಕೀಳು ಭಾಷೆ ಉಪಯೋಗಿಸುವುದು ಕೂಡ ವಕೀಲರ ಮೇಲಿನ ದೌರ್ಜನ್ಯವಾಗಲಿದೆ.
- ಇಂತಹ ದೌರ್ಜನ್ಯ ಎಸಗಿದ ವ್ಯಕ್ತಿಗೆ ಒಂದು ವರ್ಷದವರೆಗೆ ಜೈಲು ಅಥವಾ ಒಂದು ಲಕ್ಷ ರೂ.ವರೆಗೆ ದಂಡ ವಿಧಿಸಬಹುದು. ಸೂಕ್ತ ಪ್ರಕರಣಗಳಲ್ಲಿ ದಂಡ ಮತ್ತು ಜೈಲು ಎರಡನ್ನೂ ವಿಧಿಸಿ ಶಿಕ್ಷಿಸಬಹುದಾಗಿದೆ.
- ಎರಡನೇ ಬಾರಿ ಅಥವಾ ಪುನರಾವರ್ತಿತ ಅಪರಾಧಕ್ಕೆ 6 ತಿಂಗಳಿಗೆ ಕಡಿಮೆ ಇಲ್ಲದಂತೆ 2 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 10 ಲಕ್ಷದವರಿಗೆ ದಂಡ ವಿಧಿಸಬಹುದಾಗಿದೆ.
- ವಕೀಲರ ಮೇಲಿನ ದೌರ್ಜನ್ಯ ಪ್ರಕರಣಗಳ ಕುರಿತು ಡಿವೈಎಸ್ಪಿ ಅಥವಾ ಮೇಲಿನ ಹಂತದ ಪೊಲೀಸ್ ಅಧಿಕಾರಿ ಎಫ್ಐಆರ್ ದಾಖಲಿಸಿದ 90 ದಿನಗಳ ಒಳಗೆ ವಿಚಾರಣೆ ಮುಗಿಸುವುದು.
- ಇಂತಹ ಪ್ರಕರಣಗಳ ಕುರಿತು ಮುಖ್ಯ ನ್ಯಾಯಿಕ ದಂಡಾಧಿಕಾರಿ (ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್) ಶ್ರೇಣಿಗಿಂತ ಕಡಿಮೆಯಲ್ಲದ ಕೋರ್ಟ್ಗಳಲ್ಲಿ ಅನಿವಾರ್ಯ ಸಂದರ್ಭಗಳನ್ನು ಬಿಟ್ಟು ದಿನಂಪ್ರತಿ ವಿಚಾರಣೆ ನಡೆಸಿ 6 ತಿಂಗಳ ಒಳಗೆ ಪ್ರಕರಣ ಇತ್ಯರ್ಥಪಡಿಸುವುದು.
- ದೌರ್ಜನ್ಯ ಪ್ರಕರಣದಲ್ಲಿ ವಕೀಲರ ಆಸ್ತಿಗೆ ನಷ್ಟ ಉಂಟಾಗಿದ್ದಲ್ಲಿ, ದೌರ್ಜನ್ಯ ಎಸಗಿದ ವ್ಯಕ್ತಿಯಿಂದಲೇ ಪರಿಹಾರ ಕೊಡಿಸುವುದು.
- ಅಕ್ರಮ ಬಂಧನ ಹಾಗೂ ದುರುದ್ದೇಶಪೂರ್ವಕ ಪ್ರಾಸಿಕ್ಯೂಷನ್ನಿಂದ ವಕೀಲರಿಗೆ ರಕ್ಷಣೆ ನೀಡುವುದು. ಇಂತಹ ಸಂದರ್ಭಗಳಲ್ಲಿ ವಕೀಲರ ವಿರುದ್ಧ ಕ್ರಮ ಜರುಗಿಸಬೇಕಿದ್ದಲ್ಲಿ ಪೊಲೀಸರು ಮುಖ್ಯ ನ್ಯಾಯಿಕ ದಂಡಾಧಿಕಾರಿಯಿಂದ ಅನುಮತಿ ಪಡೆಯುವುದು.
ಇದನ್ನೂ ಓದಿ:ವಕೀಲರ ರಕ್ಷಣಾ ಕಾಯ್ದೆ ಜಾರಿ ಮಾಡುವಂತೆ ಆಗ್ರಹಿಸಿ ವಕೀಲರ ಪ್ರತಿಭಟನೆ