ಬೆಂಗಳೂರು: ಅಪಾರ್ಟ್ಮೆಂಟ್ನ 10ನೇ ಮಹಡಿಯಿಂದ ಕೆಳಗೆ ಬಿದ್ದು ಬಾಲಕಿ ಸಾವನ್ನಪ್ಪಿರುವ ದುರ್ಘಟನೆ ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ಸಂಜೆ ನಡೆದಿದೆ. ಮೃತ ಬಾಲಕಿಯು ಸಂಜಯ್ ನಗರದ ನಿವಾಸಿ ಎಂದು ಗುರುತಿಸಲಾಗಿದೆ. ಚಾಲುಕ್ಯ ಸರ್ಕಲ್‌ನ ಹೆಚ್ಪಿ ಅಪಾರ್ಟ್ಮೆಂಟ್ನ 10ನೇ ಮಹಡಿಯಿಂದ ಕೆಳಗಿದ್ದ ಪಾರ್ಕಿಂಗ್ನಲ್ಲಿದ್ದ ಕಾರಿನ ಮೇಲೆ ಯುವತಿ ಬಿದ್ದಿದ್ದಾಳೆ. ಬಿದ್ದ ರಭಸಕ್ಕೆ ತೀವ್ರ ರಕ್ತಸ್ರಾವವಾಗಿ ಜೀವ ಕಳೆದುಕೊಂಡಿದ್ದಾಳೆ. ಮೃತಳ ತಂದೆ ಅರವಿಂದ್ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದು, ತಾಯಿ ತೇಜು ಕೌಶಿಕ್ ಗೃಹಿಣಿಯಾಗಿದ್ದಾರೆ.
ದಂಪತಿ ಸಂಜಯ್ ನಗರದಲ್ಲಿ ವಾಸವಿದ್ದಾರೆ. ಬಾಲಕಿಯು ಸಮೀಪದ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿಕೊಂಡಂತಿದ್ದ ಬಾಲಕಿ ಭಾನುವಾರ ಅಪಾರ್ಟ್ಮೆಂಟ್ ಸುತ್ತಮುತ್ತಲೇ ಓಡಾಡುತ್ತಿದ್ದಳು ಎನ್ನಲಾಗಿದೆ. ಕಟ್ಟಡದಿಂದ ಜಿಗಿಯುವ ಮುನ್ನ ಪಕ್ಕದ ಇನ್ನೊಂದು ಅಪಾರ್ಟ್ಮೆಂಟ್ ಒಳ ಹೋಗುವುದಕ್ಕೆ ಪ್ರಯತ್ನ ಮಾಡಿದ್ದಳು ಎಂಬುದಾಗಿಯೂ ತಿಳಿದು ಬಂದಿದೆ.
ಆದರೆ, ಅಲ್ಲಿ ಸೆಕ್ಯೂರಿಟಿ ಒಳಬಿಟ್ಟಿರಲಿಲ್ಲವಂತೆ. ಆತಂಕದಿಂದಲೇ ಪೋನ್ನಲ್ಲಿ ಮಾತನಾಡುತ್ತ ಹೇಗೊ ಅಪಾರ್ಟ್ಮೆಂಟ್ ಒಳನುಗ್ಗಿ 10ನೇ ಮಹಡಿಯಿಂದ ಜಿಗಿದು ಮೃತಪಟ್ಟಿದ್ದಾಳೆ. ಮಾನಸಿಕ ಖಿನ್ನತೆಯೇ ಆತ್ಮಹತ್ಯೆಗೆ ಕಾರಣ ಎನ್ನಲಾಗುತ್ತಿದೆ. ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿಸಿಪಿ ಪ್ರತಿಕ್ರಿಯೆ: ''ಬಹುಮಹಡಿ ಕಟ್ಟಡದ 10ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಮಾನಸಿಕ ಖಿನ್ನತೆ ಕಾರಣವೆಂದು ಗೊತ್ತಾಗಿದೆ. ಬಾಲಕಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದು, ಓದಿನಲ್ಲಿ ಎಲ್ಲರಿಗಿಂತ ಮುಂದಿದ್ದಳು. ಕೆಲದಿನಗಳಿಂದ ಮಾನಸಿಕ ಖಿನ್ನತೆಗೊಳಗಾಗಿದ್ದು, ಈ ಹಿಂದೆಯೂ ಆತ್ಮಹತ್ಯೆಗೆ ಯತ್ನಿಸಿದ್ದಳು ಎನ್ನಲಾಗಿದೆ. ಇದೇ ಕಾರಣಕ್ಕೆ ಪೋಷಕರು ವೈದ್ಯರ ಬಳಿ ಕೌನ್ಸಿಲಿಂಗ್ ಮಾಡಿಸಿದ್ದರು. ಆದರೂ ಸಹ ಭಾನುವಾರ ಸಂಜೆ ಕಾಲೇಜಿನ ಪಕ್ಕದಲ್ಲಿರುವ ಅಪಾರ್ಟ್ಮೆಂಟ್ಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸದ್ಯ ಘಟನೆ ಬಗ್ಗೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ'' ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸಗೌಡ ತಿಳಿಸಿದ್ದಾರೆ.