ಬೆಂಗಳೂರು:ಪ್ಯಾಂಟ್ ಜೇಬಿನಲ್ಲಿದ್ದ ಮೊಬೈಲ್ ಫೋನ್ ಸಿಡಿದ ಪರಿಣಾಮ ಯುವಕನ ತೊಡೆಗೆ ಗಾಯವಾಗಿರುವ ಘಟನೆ ವೈಟ್‌ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವೈಟ್‌ಫೀಲ್ಡ್ ನಿವಾಸಿ ಪ್ರಸಾದ್ ಗಾಯಗೊಂಡಿರುವ ವ್ಯಕ್ತಿ. ಕಳೆದ ಅಕ್ಟೋಬರ್ ತಿಂಗಳಲ್ಲಿ ಮೊಬೈಲ್ ಖರೀದಿಸಿ ಬಳಸುತ್ತಿದ್ದರು.
ಇಂದು (ಬುಧವಾರ) ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಜೇಬಿನಲ್ಲಿ ಇಟ್ಟುಕೊಂಡಿದ್ದ ಮೊಬೈಲ್ ಏಕಾಏಕಿ ಸ್ಫೋಟಗೊಂಡಿದೆ. ಗಾಯಗೊಂಡಿರುವ ಪ್ರಸಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಶಸ್ತ್ರಚಿಕಿತ್ಸೆಗೆ ವೈದ್ಯರು ಲಕ್ಷಾಂತರ ರೂಪಾಯಿ ಖರ್ಚಾಗಲಿದೆ ಎಂದು ತಿಳಿಸಿದ್ದಾರೆ.
ಮೊಬೈಲ್ ಸ್ಫೋಟ ಪ್ರಕರಣ ಶೋ ರೂಂ ಅವರ ಗಮನಕ್ಕೆ ಬರುತ್ತಿದ್ದಂತೆ ಮೆಡಿಕಲ್ ವೆಚ್ಚದ ಜೊತೆಗೆ ಮೊಬೈಲ್ ಹಣ ಕೊಡುತ್ತೇವೆ ಎನ್ನುತ್ತಿದ್ದಾರೆ. ಆದರೆ, ಸರ್ಜರಿಗೆ ಬರೋಬ್ಬರಿ 4 ಲಕ್ಷ ರೂ. ಖರ್ಚು ಆಗುತ್ತದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಇದರಿಂದ ಪೂರ್ಣ ಪ್ರಮಾಣದ ಬಿಲ್ ಭರಿಸುವಂತೆ ಗಾಯಾಳು ಪಟ್ಟು ಹಿಡಿದಿದ್ದಾರೆ.
ಈ ಬಗ್ಗೆ ಸಮಸ್ಯೆ ಹೇಳಿಕೊಳ್ಳಲು ಕುಟುಂಬ ಸದಸ್ಯರು ಮೊಬೈಲ್ ಸೆಂಟರ್‌ಗೆ ಹೋದರೆ ಸರಿಯಾಗಿ ಸ್ಪಂದಿಸದ ಆರೋಪ ಕೂಡ ಕೇಳಿಬಂದಿದೆ. ವೈಟ್‌ಫೀಲ್ಡ್ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪ್ರಸಾದ್‌ಗೆ ಈಗ ಮೊಬೈಲ್ ಸ್ಫೋಟದಿಂದ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಕೆಲಸ ಮಾಡದೇ ವಿಶ್ರಾಂತಿ ಪಡೆದರೆ, ಮನೆ ಮತ್ತು ತನ್ನ ಖರ್ಚಿಗೆ ಹಣ ಯಾರು ಕೊಡುತ್ತಾರೆ ಎಂಬಂತಹ ಪ್ರಶ್ನೆ ಎದುರಾಗಿದೆ. ಈ ಹಿನ್ನೆಲೆ ಕಂಪನಿಯವರೇ ಸಂಪೂರ್ಣ ವೆಚ್ಚ ಭರಿಸಬೇಕು ಎಂದು ಆಗ್ರಹಿಸಿದ್ದಾರೆ. ಸದ್ಯ ಪ್ರಸಾದ್ ಅವರು, ವಕೀಲರ ಮೊರೆ ಹೋಗಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ:ಮುದ್ದೆ ಊಟ ಸೇವಿಸಿ ಅಸ್ವಸ್ಥರಾಗಿದ್ದ ತಂದೆ-ಮಗಳು ಸಾವು, ಇನ್ನೋರ್ವನ ಸ್ಥಿತಿ ಗಂಭೀರ