ಕರ್ನಾಟಕ

karnataka

ETV Bharat / state

ಚಿನ್ನ ಖರೀದಿ ನೆಪದಲ್ಲಿ ಒಡವೆ ಕದಿಯುತ್ತಿದ್ದ ಕಳ್ಳಿಯ ಬಂಧನ...

ಚಿನ್ನ ತೆಗೆದುಕೊಳ್ಳುವ ಸೋಗಿನಲ್ಲಿ ಹೋಗಿ ಒಡವೆ ಕದಿಯುತ್ತಿದ್ದ ಮಹಿಳಾ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

By

Published : Nov 7, 2022, 3:09 PM IST

Kn_bng
ಬಂಧಿತ ಆರೋಪಿ

ಬೆಂಗಳೂರು: ಚಿನ್ನ ಖರೀದಿ ನೆಪದಲ್ಲಿ ಜ್ಯೂವೆಲ್ಲರಿ ಶಾಪ್​ಗಳಿಗೆ ತೆರಳಿ ಮಾಲೀಕರ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುತ್ತಿದ್ದ ಖತರ್​ನಾಕ್ ಕಳ್ಳಿಯನ್ನ ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.

ಲಗ್ಗೆರೆ ವಾಸಿಯಾಗಿದ್ದ ನದೀಯಾ ಬಂಧಿತೆಯಾಗಿದ್ದು ಸದ್ಯ ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಲಾಗಿದೆ. ಕಳ್ಳತನ ಮಾಡುವುದನ್ನು ಕಾಯಕ ಮಾಡಿಕೊಂಡಿದ್ದ ಈಕೆ ಸುಲಭವಾಗಿ ಹಣ ಸಂಪಾದಿಸಲು ವಂಚನೆಯ ದಾರಿ ಹಿಡಿದಿದ್ದಳು. ಇದಕ್ಕಾಗಿ ಆಕೆ ಆಯ್ಕೆ ಮಾಡಿಕೊಂಡಿದ್ದು ಜ್ಯೂವೆಲ್ಲರಿ ಶಾಪ್​ಗಳನ್ನ.

ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ಹೋಗಿ ಮಕ್ಕಳ ಚಿನ್ನದ ಉಂಗುರ ತೋರಿಸಿ ಎಂದು ಹೇಳುತ್ತಿದ್ದಳು. ಬೇರೆ ಬೇರೆ ತರಹದ ಡಿಸೈನ್ ತೋರಿಸುವಂತೆ ಸಿಬ್ಬಂದಿಗೆ ಬೇಡಿಕೆ ಈಡುತ್ತಿದ್ದಳು. ಇವರ ಅಸಲಿ ಬಣ್ಣ ತಿಳಿಯದ ಮಾಲೀಕರು ಎಲ್ಲ ರೀತಿಯ ಚಿನ್ನದ ಡಿಸೈನ್​ಗಳನ್ನ ತೋರಿಸುತ್ತಿದ್ದರು. ನೋಡುವ ನೆಪದಲ್ಲಿ ಮಾಲೀಕರನ್ನು ಕಣ್ತಪ್ಪಿಸಿ ಕ್ಷಣಾರ್ಧದಲ್ಲಿ ಒಡವೆ ಕಳ್ಳತನ ಮಾಡಿ ಬ್ಯಾಗ್​ಗೆ ಹಾಕಿಕೊಳ್ಳುತ್ತಿದ್ದಳು.

ಬಳಿಕ ಏನೋ ನೆಪ ಹೇಳಿ ಮುಂದಿನ ಬಾರಿ ಖರೀದಿಸುವುದಾಗಿ ಹೇಳಿ ಅಲ್ಲಿಂದ‌ ಕಾಲ್ಕಿಳುತ್ತಿದ್ದಳು. ಇದೇ ತಂತ್ರ ಬಳಸಿ ಹಲವು ಬಾರಿ ಚಿನ್ನಾಭರಣ ಎಗರಿದ್ದಳು ಕೂಡಾ. ಮಾಲೀಕರು ಸಹ ಕಳ್ಳತನವಾಗಿರುವುದನ್ನ ಅರಿಯದೇ ಸುಮ್ಮನಾಗುತ್ತಿದ್ದರು. ಕಳೆದ ತಿಂಗಳು 19 ರಂದು ಯಶವಂತಪುರದ ಮಹಾವೀರ್ ಜ್ಯೂವೆಲ್ಲರಿ ಶಾಪ್​ನಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ್ದಳು‌‌. ಲೆಕ್ಕದಲ್ಲಿ ವ್ಯತ್ಯಾಸ ಕಂಡು ಬಂದಿದ್ದರಿಂದ ಮಾಲೀಕರು ಸಿಸಿಟಿವಿ ಪರಿಶೀಲಿಸಿದಾಗ ಮಹಿಳೆಯ ಕಳ್ಳತನ ಕೃತ್ಯ ಬೆಳಕಿಗೆ ಬಂದಿದೆ.‌ ಈ ಸಂಬಂಧ ಪೊಲೀಸರಿಗೆ ನೀಡಿದ ದೂರಿನ ಆಧಾರದ ಮೇಲೆ ನದಿಯಾಳನ್ನು ಬಂಧಿಸಿ 3.2 ಲಕ್ಷ ಬೆಲೆಯ 63 ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದಾರೆ.

ಜ್ಯೂವೆಲ್ಲರಿ‌ ಶಾಪ್​ಗಳ‌‌ ಮಾಲೀಕರನ್ನ ಯಾಮಾರಿಸುವುದಲ್ಲದೇ ಬಸ್ ನಿಲ್ದಾಣ ಹಾಗೂ ಬಸ್​ನಲ್ಲಿ ಪ್ರಯಾಣಿಸುವ ವೃದ್ದರನ್ನು ಗುರಿಯಾಗಿಸಿ ಕಳ್ಳತನ‌ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ. ಮಹಿಳೆ ಬಂಧನದಿಂದ ಯಶವಂತಪುರ ಹಾಗೂ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಸಗಿದ್ದ ನಾಲ್ಕು ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿರುವುದಾಗಿ ನಗರ ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್ ತಿಳಿಸಿದ್ದಾರೆ.

ಇದನ್ನೂ ಓದಿ:ವಿದೇಶಿ ಹಾವುಗಳ ಕಳ್ಳಸಾಗಣೆ.. ಟಾಟಾ ನಗರ ರೈಲು ನಿಲ್ದಾಣದಲ್ಲಿ ಮಹಿಳೆ ಅರೆಸ್ಟ್​

ABOUT THE AUTHOR

...view details