ಬೆಂಗಳೂರು: ದೇವರ ದರ್ಶನಕ್ಕೆ ಹೋಗುತ್ತಿದ್ದ ಭಕ್ತರನ್ನು ಟಾರ್ಗೆಟ್ ಮಾಡುತ್ತಿದ್ದ ಕಳ್ಳ ಜೋಡಿಯಲ್ಲಿ ಒಬ್ಬಳನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. ದಾಳಿ ವೇಳೆ ಆಕೆಯ ಬಾಯ್ ಫ್ರೆಂಡ್ ಕಂ ಸಹಚರ ಮಹದೇವ ಎಸ್ಕೇಪ್ ಆಗಿದ್ದು ಬಂಧಿತ ಆರೋಪಿಯಿಂದ 20 ಲಕ್ಷ ರೂ. ಮೌಲ್ಯದ 439 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆಂಧ್ರ ಮೂಲದ ಮಮತಾ (28) ಬಂಧಿತ ಖತರ್ನಾಕ್ ಲೇಡಿ ಎಂದು ತಿಳಿದು ಬಂದಿದೆ. ಪ್ರಕರಣ ಯಶವಂತಪುರ ಠಾಣೆಯಲ್ಲಿ ದಾಖಲಾಗಿದ್ದು ನಗರದಿಂದ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ತೆರಳುತ್ತಿದ್ದ ಯಾತ್ರಾರ್ಥಿಗಳ ಬ್ಯಾಗ್ಗಳನ್ನೇ ಎಗರಿಸುತ್ತಿದ್ದ ಮಮತಾ ಮತ್ತು ಈಕೆಯ ಗೆಳೆಯ, ದೇವರ ದರ್ಶನ ಪಡೆದು ಪುನೀತರಾಗಬೇಕು ಎನ್ನುವವರ ಬೆಲೆಬಾಳುವ ಕಾಣಿಕೆಗಳನ್ನು ಎಗರಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಯಾತ್ರೆಗೆ ತೆರಳುವ ಶ್ರೀಮಂತರನ್ನೇ ಟಾರ್ಗೆಟ್ ಮಾಡುತ್ತಿದ್ದ ಈ ಜೋಡಿ ಚಿಕ್ಕ ಅಥವಾ ವ್ಯಾನಿಟಿ ಬ್ಯಾಗ್ಗಳನ್ನು ಟವೆಲ್ನಲ್ಲಿ ಸುತ್ತಿಕೊಂಡು ಎಸ್ಕೇಪ್ ಆಗುತ್ತಿದ್ದರು. ಲೇಡಿಯ ಗಂಡ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದು, ಗೆಳೆಯನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.