ಬೆಂಗಳೂರು: ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಅಂಗವಾಗಿ ದಕ್ಷಿಣ ವಲಯದ ಲಾಲ್ ಬಾಗ್ ಪೂರ್ವ ದ್ವಾರದ ಬಳಿ ಶುಕ್ರವಾರ ಹಮ್ಮಿಕೊಂಡಿದ್ದ ಕಾಲ್ನಡಿಗೆ ಜಾಥಾ ಕಾರ್ಯಕ್ರಮಕ್ಕೆ ಪಾಲಿಕೆ ಹಣಕಾಸು ವಿಭಾಗದ ವಿಶೇಷ ಆಯುಕ್ತ ಹಾಗೂ ವಲಯ ಆಯುಕ್ತ ಜಯರಾಮ್ ರಾಯಪುರ ಚಾಲನೆ ನೀಡಿದರು. ಜಾಥಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಬಾರಿ ಮತದಾನದ ಪ್ರಮಾಣವು ಶೇ. 52 ರಷ್ಟಿದ್ದು, ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಮತದಾನ ಪ್ರಮಾಣವನ್ನು ಶೇ. 60 ಆಗಬೇಕೆಂಬ ಉದ್ದೇಶದಿಂದ ಸಾಕಷ್ಟು ಮತದಾರರ ಜಾಗೃತಿ ಅಭಿಯಾನಗಳನ್ನು ಮಾಡಲಾಗುತ್ತಿದೆ.
ಅದರ ಭಾಗವಾಗಿ ಲಾಲ್ ಬಾಗ್ನಲ್ಲಿ ಬರುವ ವಾಯುವಿಹಾರಿಗಳಲ್ಲಿ ಮತದಾನದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತದಾನ ಮಾಡಬೇಕು. ದಕ್ಷಿಣ ವಲಯದ ವಿಜಯ ಕಾಲೇಜಿನಲ್ಲಿ ಸುಮಾರು 500 ಯುವ ಮತದಾರರಿದ್ದು, ಕಾಲೇಜಿಗೆ ತೆರಳಿ ಮತದಾನದ ದಿನ ತಪ್ಪದೆ ಮತದಾನ ಮಾಡಲು ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು. ಇನ್ನೂ ಮೇ 10 ರವರೆಗೂ ಎಲ್ಲಾ ಕಾಲೇಜು, ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿ ಮತದಾನ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ವಾಯುವಿಹಾರಿಗಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಲಾಲ್ ಬಾಗ್ ಉದ್ಯಾನವನದಲ್ಲಿ ವಾಯುವಿಹಾರಕ್ಕೆ ಬಂದಂತಹ ನಾಗರಿಕರಲ್ಲಿ ಮತದಾನದ ದಿನವಾದ ಮೇ 10 ರಂದು ತಪ್ಪದೆ ಮತದಾನ ಮಾಡಲು ಜಾಗೃತಿ ಮೂಡಿಸಲಾಯಿತು. ಜೊತೆಗೆ ಮತದಾನದ ಪ್ರತಿಜ್ಞಾವಿಧಿಯನ್ನು ಬೋಧಿಸಿಲಾಯಿತು.
ಗೆಜ್ಜೆ ಹೆಜ್ಜೆ ರಂಗತಂಡದಿಂದ ಬೀದಿ ನಾಟಕ:ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಹಿನ್ನೆಲೆ ಹಾಸ್ಯ ನಟರಾದ ರಮಾನಂದರವರ ಗೆಜ್ಜೆ ಹೆಜ್ಜೆ ರಂಗತಂಡದಿಂದ ಬೀದಿ ನಾಟಕದ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು. ಈ ವೇಳೆ ವಲಯ ಜಂಟಿ ಆಯುಕ್ತ ಹಾಗೂ ಅಪರ ಜಿಲ್ಲಾ ಚುನಾವಣಾಧಿಕಾರಿ ಡಾ. ಜಗದೀಶ್ ಕೆ. ನಾಯಕ್, ಸ್ವೀಪ್ ನೋಡಲ್ ಅಧಿಕಾರಿ ಸಿದ್ದೇಶ್ವರ್, ಉಪ ಆಯುಕ್ತೆ ಲಕ್ಷ್ಮೀ ದೇವಿ, ಕಂದಾಯ ಅಧಿಕಾರಿಗಳು, ಎನ್.ಸಿ.ಸಿ ವಿದ್ಯಾರ್ಥಿಗಳು ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.