ಬೆಂಗಳೂರು: ವಿಧಾನಸಭೆ ಚುನಾವಣೆಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಗುರುವಾರಕ್ಕೆ ಮುಕ್ತಾಯವಾಗಿದೆ. ಕೊನೆಯ ದಿನವಾದ ಜಾತ್ರೋಪಾದಿಯಲ್ಲಿ 1,934 ನಾಮಪತ್ರ ಸಲ್ಲಿಕೆ ಮಾಡಲಾಗಿದೆ. ಮತಯುದ್ಧದ ಮೊದಲ ಅಧ್ಯಾಯವಾದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಗುರುವಾರ ಮುಕ್ತಾಯವಾಗಿದೆ. ಏ.13ರಿಂದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿತ್ತು. ಏಪ್ರಿಲ್ 20ರಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿತ್ತು.
ಶುಕ್ರವಾರ ನಾಮಪತ್ರ ಪರಿಶೀಲನೆ ನಡೆಯಲಿದ್ದು, ಏ.24ರ ವರೆಗೆ ನಾಮಪತ್ರ ವಾಪಾಸು ಪಡೆಯಲು ಅವಕಾಶ ಇದೆ. ಈವರೆಗೆ ನಾಮಪತ್ರ ಸಲ್ಲಿಕೆಯಲ್ಲಿ ಬ್ಯುಸಿಯಾಗಿದ್ದ ಅಭ್ಯರ್ಥಿಗಳು ಶುಕ್ರವಾರದಿಂದ ಪೂರ್ಣ ಪ್ರಮಾಣದಲ್ಲಿ ತಮ್ಮ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ.
ಒಟ್ಟು 5,102 ನಾಮಪತ್ರ ಸಲ್ಲಿಕೆ:ಏ.13ರಿಂದ ನಾಮಪತ್ರ ಸಲ್ಲಿಕೆಯ ಕೊನೆ ದಿನವಾದ ಗುರುವಾರದವರೆಗೆ ಒಟ್ಟು 5,102 ನಾಮಪತ್ರ ಸಲ್ಲಿಕೆಯಾಗಿವೆ. ಒಟ್ಟು 3,632 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ. ಈ ಪೈಕಿ 3,327 ಪುರುಷ ಅಭ್ಯರ್ಥಿಗಳಿಂದ 4,710 ನಾಮಪತ್ರ ಸಲ್ಲಿಕೆಯಾಗಿದೆ. ಇನ್ನು 304 ಮಹಿಳಾ ಅಭ್ಯರ್ಥಿಗಳಿಂದ 391 ನಾಮಪತ್ರ ಸಲ್ಲಿಕೆ ಮಾಡಲಾಗಿದೆ. ಇತರೆಯಿಂದ ಒಂದು ನಾಮಪತ್ರ ಸಲ್ಲಿಸಲಾಗಿದೆ.
ಅಭ್ಯರ್ಥಿ ನಾಮಪತ್ರ ಸಲ್ಲಿಸುವ ದೃಶ್ಯ ನಾಮಪತ್ರ ಸಲ್ಲಿಕೆಯ 8 ದಿನಗಳ ಅವಧಿಯಲ್ಲಿ ಒಟ್ಟು ಬಿಜೆಪಿ ಅಭ್ಯರ್ಥಿಗಳಿಂದ 707, ಕಾಂಗ್ರೆಸ್ ಅಭ್ಯರ್ಥಿಗಳಿಂದ 651, ಜೆಡಿಎಸ್ ಅಭ್ಯರ್ಥಿಗಳಿಂದ 455, ಎಎಪಿ ಅಭ್ಯರ್ಥಿಗಳಿಂದ 373, ಬಿಎಸ್ಪಿ ಅಭ್ಯರ್ಥಿಗಳಿಂದ 179, ಸಿಪಿಐಎಂ ಅಭ್ಯರ್ಥಿಯಿಂದ 5, ಎನ್ಪಿಪಿ ಅಭ್ಯರ್ಥಿಗಳಿಂದ 5 ನಾಮಪತ್ರ ಸಲ್ಲಿಕೆ ಮಾಡಲಾಗಿದೆ. ನೋಂದಾಯಿತ ಗುರುತಿಸದ ಪಕ್ಷಗಳ ಅಭ್ಯರ್ಥಿಗಳಿಂದ 1007 ಹಾಗೂ ಪಕ್ಷೇತರ ಅಭ್ಯರ್ಥಿಗಳಿಂದ ಒಟ್ಟು 1,720 ನಾಮಪತ್ರಗಳು ಸಲ್ಲಿಕೆಯಾಗಿವೆ.
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಗುರುವಾರ 1,691 ಅಭ್ಯರ್ಥಿಗಳಿಂದ 1,934 ನಾಮಪತ್ರ ಸಲ್ಲಿಕೆ ಮಾಡಲಾಗಿದೆ. ಈ ಪೈಕಿ 1,544 ಪುರಷ ಅಭ್ಯರ್ಥಿಗಳಿಂದ 1,771 ನಾಮಪತ್ರ ಸಲ್ಲಿಕೆಯಾಗಿವೆ. 146 ಮಹಿಳಾ ಅಭ್ಯರ್ಥಿಗಳಿಂದ 162 ನಾಮಪತ್ರ ಸಲ್ಲಿಕೆಯಾಗಿವೆ. ಇತರೆಯಿಂದ 1 ನಾಮಪತ್ರ ಸಲ್ಲಿಕೆ ಮಾಡಲಾಗಿದೆ.
ನಾಮಪತ್ರ ಸಲ್ಲಿಸುತ್ತಿರುವ ಅಭ್ಯರ್ಥಿ ದೃಶ್ಯ ಗುರುವಾರ ಬಿಜೆಪಿ ಅಭ್ಯರ್ಥಿಗಳಿಂದ 162, ಕಾಂಗ್ರೆಸ್ ಅಭ್ಯರ್ಥಿಗಳಿಂದ 157, ಜೆಡಿಎಸ್ ಅಭ್ಯರ್ಥಿಗಳಿಂದ 150, ಎಎಪಿ ಅಭ್ಯರ್ಥಿಗಳಿಂದ 138, ಬಿಎಸ್ ಪಿ ಅಭ್ಯರ್ಥಿಗಳಿಂದ 95, ಸಿಪಿಐಎಂ ಅಭ್ಯರ್ಥಿಯಿಂದ 1, ಎನ್ ಪಿಪಿ ಅಭ್ಯರ್ಥಿಗಳಿಂದ 2 ನಾಮಪತ್ರ ಸಲ್ಲಿಕೆ ಮಾಡಲಾಗಿದೆ. ನೋಂದಾಯಿತ ಗುರುತಿಸದ ಪಕ್ಷಗಳ ಅಭ್ಯರ್ಥಿಗಳಿಂದ 337 ಹಾಗೂ ಪಕ್ಷೇತರ ಅಭ್ಯರ್ಥಿಗಳಿಂದ 892 ನಾಮಪತ್ರ ಸಲ್ಲಿಕೆಯಾಗಿವೆ.
ಕೊನೆಯದಿನ ಘಟಾನುಘಟಿಗಳಿಂದ ನಾಮಪತ್ರ:ನಾಮಪತ್ರ ಸಲ್ಲಿಕೆಯ ಕೊನೆಯ ದಿನ ಸಂಸದ ಡಿಕೆ ಸುರೇಶ್ ಕನಕಪುರದಲ್ಲಿ ನಾಮಪತ್ರ ಸಲ್ಲಿಸಿರುವುದು ಅಚ್ಚರಿ ಮೂಡಿಸಿದೆ. ಸಂಸದ ಡಿ.ಕೆ.ಸುರೇಶ್ ಪದ್ಮನಾಭನಗರದಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ ಎಂಬ ನಿರೀಕ್ಷೆ ಇತ್ತು. ಆದರೆ ದಿಢೀರ್ ಬೆಳವಣಿಗೆಯಲ್ಲಿ ಸಂಸದ ಡಿ.ಕೆ.ಸುರೇಶ್ ತಮ್ಮ ಅಣ್ಣನ ಕನಕಪುರ ಕ್ಷೇತ್ರದಲ್ಲೇ ನಾಮಪತ್ರ ಸಲ್ಲಿಸಿ ಅಚ್ಚರಿ ಮೂಡಿಸಿದರು. ಡಿಕೆಶಿ ಸಲ್ಲಿಸಿದ ನಾಮಪತ್ರ ತಾಂತ್ರಿಕ ಕಾರಣದಿಂದ ತಿರಸ್ಕೃತವಾಗವಬಹುದು ಎಂಬ ಭೀತಿಯಿಂದ ಮುಂಜಾಗ್ರತಾ ಕ್ರಮವಾಗಿ ಡಿಕೆ.ಸುರೇಶ್ ತಮ್ಮ ನಾಮಪತ್ರ ಸಲ್ಲಿಸಿದರು.
ಇನ್ನು ಹಾಸನ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಪ್ರಕಾಶ್ ಬೃಹತ್ ಮೆರವಣಿಗೆಯೊಂದಿಗೆ ನಾಮಪತ್ರ ಸಲ್ಲಿಕೆ ಮಾಡಿದರು. ದೇವೇಗೌಡರು, ಹೆಚ್.ಡಿ.ಕುಮಾರಸ್ವಾಮಿ, ಹೆಚ್.ಡಿ.ರೇವಣ್ಣ, ಭವಾನಿ ರೇವಣ್ಣ, ಪ್ರಜ್ವಲ್ ರೇವಣ್ಣ ಜೊತೆಗೂಡಿ ಜೆಡಿಎಸ್ ಶಕ್ತಿ ಪ್ರದರ್ಶನ ಮಾಡಿತು. ಇನ್ನು ಹಾಸನದ ಬಿಜೆಪಿ ಅಭ್ಯರ್ಥಿಯಾಗಿ ಪ್ರೀತಂಗೌಡ ಪತ್ನಿ ಕಾವ್ಯಾ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ತಾಂತ್ರಿಕ ದೋಷ ಅರಿತು ಮುಂಜಾಗ್ರತೆ ವಹಿಸಿ ಪತ್ನಿ ಕೈಯಿಂದ ಪ್ರೀತಂ ಗೌಡ ನಾಮಪತ್ರ ಸಲ್ಲಿಕೆ ಮಾಡಿಸಿದ್ದಾರೆ ಎನ್ನಲಾಗಿದೆ.
ನಾಮಪತ್ರ ಸಲ್ಲಿಸುವ ಮೊದಲು ಅಭ್ಯರ್ಥಿಯ ಮೆರವಣಿಗೆ ತೇರದಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹಾಲಿ ಶಾಸಕ ಸಿದ್ದು ಸವದಿ ಉಮೇದುವಾರಿಕೆ ಸಲ್ಲಿಸಿದರು. ಮಂಡ್ಯ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಅಶೋಕ್ ಜಯರಾಂ, ಕಾಂಗ್ರೆಸ್ ಅಭ್ಯರ್ಥಿಯಾಗಿ ರವಿಕುಮಾರ್ ಗಾಣಿಗ, ಜೆಡಿಎಸ್ ಅಭ್ಯರ್ಥಿಯಾಗಿ ಮನ್‌ಮುಲ್ ಅಧ್ಯಕ್ಷ ಬಿ.ಆರ್. ರಾಮಚಂದ್ರ ನಾಮಪತ್ರ ಸಲ್ಲಿಸಿದರು. ಚಿಕ್ಕೋಡಿ- ಸದಲಗಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಗಣೇಶ ಹುಕ್ಕೇರಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಹಾಗೂ ಕಾಂಗ್ರೆಸ್ ಟಿಕೆಟ್ ಸಿಗದ ಕಾರಣಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಮೊಹಿಯುದ್ದೀನ್ ಬಾವ ನಾಮಪತ್ರ ಸಲ್ಲಿಸಿದರು.
ಬೆಂಗಳೂರಲ್ಲೂ ನಾಮಪತ್ರ ಭರಾಟೆ:ಬೆಂಗಳೂರಲ್ಲೂ ಕೊನೆಯ ದಿನ ನಾಮಪತ್ರ ಭರಾಟೆ ಜೋರಾಗಿದ್ದು, ಗುರುವಾರ 279 ನಾಮಪತ್ರ ಸಲ್ಲಿಕೆಯಾಯಿತು. ಬಿಜೆಪಿಯಿಂದ 15, ಕಾಂಗ್ರೆಸ್ನಿಂದ 20, ಎಎಪಿ ಅಭ್ಯರ್ಥಿಗಳಿಂದ 21, ಜೆಡಿಎಸ್ ಅಭ್ಯರ್ಥಿಗಳಿಂದ 20 ನಾಮಪತ್ರ ಸಲ್ಲಿಕೆ ಮಾಡಲಾಯಿತು. 128 ಪಕ್ಷೇತರರು ಉಮೇದುವಾರಿಕೆ ಸಲ್ಲಿಸಿದರು. ಅದೇ ರೀತಿ ನೋಂದಾಯಿತ ಗುರುತಿಸದ ಪಕ್ಷಗಳ ಅಭ್ಯರ್ಥಿಗಳಿಂದ 62 ನಾಮಪತ್ರ ಸಲ್ಲಿಕೆ ಮಾಡಲಾಗಿದೆ.
ಬೆಂಗಳೂರು ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ಎನ್.ಎ.ಹ್ಯಾರಿಸ್, ಕೃಷ್ಣಭೈರೇಗೌಡ ಮತ್ತು ಬೈರತಿ ಸುರೇಶ್ ಅವರು ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ಶಕ್ತಿ ಪ್ರದರ್ಶನ ಮಾಡಿ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು. ಇತ್ತ ಹೆಬ್ಬಾಳ ಬಿಜೆಪಿ ಅಭ್ಯರ್ಥಿ ಕಟ್ಟಾ ಜಗದೀಶ್ ಮೆರವಣಿಗೆ ಮೂಲಕ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಇತ್ತ ತಮಿಳುನಾಡು ಬಿಜೆಪಿ ಮೈತ್ರಿಕೂಟದ ಪಾಲುದಾರ ಎಐಎಡಿಎಂಕೆ ಬೆಂಗಳೂರಿನ ಪುಲಕೇಶಿನಗರ ವಿಧಾನಸಭಾ ಕ್ಷೇತ್ರದಿಂದ ತನ್ನ ಅಭ್ಯರ್ಥಿ ಡಿ.ಅನ್ಬರಸನ್ ರಿಂದ ನಾಮಪತ್ರ ಸಲ್ಲಿಸಿದರು.
ಓದಿ:ಮಂಡ್ಯ ಜಿದ್ದಾಜಿದ್ದಿ: ಅವಮಾಸ್ಯೆ ದಿನ ಶಕ್ತಿ ದೇವತೆಗೆ ಪೂಜೆ ಸಲ್ಲಿಸಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು