ಬೆಂಗಳೂರು : ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದವರ ಮೇಲೆ ಟಿಪ್ಪರ್ ಹರಿದು ಸ್ಥಳದಲ್ಲಿಯೇ ಮಹಿಳೆ ಸಾವನ್ನಪ್ಪಿದ್ದು, ಅವರ ಮೊಮ್ಮಗನ ಸ್ಥಿತಿ ಗಂಭೀರವಾಗಿರುವ ಘಟನೆ ಇಂಡ್ಲವಾಡಿ ಕ್ರಾಸ್ನಲ್ಲಿ ಇಂದು ನಡೆದಿದೆ. ಇಂಡ್ಲವಾಡಿ ವಾಸಿ ನಿಂಗಮ್ಮ(70) ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದ ಸಂದೀಪ್ ಎಂಬಾತನ ಸೊಂಟ ಮುರಿದು ಬೆಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳಗ್ಗೆ 9ರ ಸುಮಾರಿಗೆ ಇಂಡ್ಲವಾಡಿ ನಿವಾಸಿ ನಿಂಗಮ್ಮ, ತನ್ನ ಮೊಮ್ಮಗ ಸಂದೀಪ್ ಹಾಗೂ ಮೊಮ್ಮಗಳೊಂದಿಗೆ ಪಲ್ಸರ್ ಬೈಕ್ ಮೇಲೆ ಇಂಡ್ಲವಾಡಿ ಗ್ರಾಮದಿಂದ ಇಂಡ್ಲವಾಡಿ ಕ್ರಾಸ್ ಬಳಿ ಆನೇಕಲ್ಗೆ ಬರುವ ಸಂದರ್ಭದಲ್ಲಿ ಹಿಂಬದಿಯಿಂದ ಜಿಗಣಿಯಿಂದ ವೇಗವಾಗಿ ಬಂದ ಟಿಪ್ಪರ್ ಲಾರಿ ಪಲ್ಸರ್ಗೆ ಡಿಕ್ಕಿ ಹೊಡೆದು ಅನಂತರ ಬೈಕ್ ಮೇಲೆ ಹರಿದಿದೆ. ಪರಿಣಾಮ ನಿಂಗಮ್ಮಳ ಎಡಗೈ ತೋಳು ಹಾಗು ತಲೆಯ ಭಾಗ ನಜ್ಜುಗುಜ್ಜಾಗಿದೆ. ಅಲ್ಲದೇ, ಅವರ ಮೊಮ್ಮಗ ಸಂದೀಪ್ಗೂ ಗಂಭೀರ ಗಾಯಗಳಾಗಿವೆ.
ಮೃತರ ಸಂಬಂಧಿಕರಿಂದ ಲಾರಿಗೆ ಕಲ್ಲು ತೂರಾಟ:ಕೂಡಲೇ ಜನ ಅಪಘಾತದ ಸ್ಥಳಕ್ಕೆ ಬರುವುದನ್ನು ನೋಡಿ ಟಿಪ್ಪರ್ ನಿಲ್ಲಿಸಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಮೃತರ ಸಂಬಂಧಿಕರು ಲಾರಿಗೆ ಕಲ್ಲು ತೂರಾಟ ನಡೆಸುವ ವೇಳೆಗೆ ಸ್ಥಳಕ್ಕೆ ಬಂದ ಪೊಲೀಸರ ಮೇಲೆಯೂ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಇದರಿಂದ ಸ್ಥಳದಲ್ಲಿ ಕೆಲಕಾಲ ಪರಿಸ್ಥಿತಿ ಬಿಗಡಾಯಿಸಿತ್ತು.
ಬೈಕ್ ಮೇಲೆ ಮೂವರು ಸವಾರಿ ಮಾಡಿದ್ದು, ಅಜಾಗರೂಕತೆಯಿಂದ ವೇಗವಾಗಿ ಬಂದ ಟಿಪ್ಪರ್ ಚಾಲನೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ರಸ್ತೆಯಲ್ಲಿ ಒಂದು ಹಂಪ್ ಅನ್ನು ಅಳವಡಿಸಿ ಜನರನ್ನು ವೇಗದ ವಾಹನಗಳಿಂದ ಕಾಪಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.