ಬೆಂಗಳೂರು:ಉನ್ನತ ವಿದ್ಯಾಭ್ಯಾಸ ಮಾಡಿ ಕೆಲಸವಿಲ್ಲ ಎಂದು ಅಲೆದಾಡುವ ಯುವಜನರ ಮಧ್ಯೆ ಇಲ್ಲೊಬ್ಬ ಉನ್ನತ ವಿದ್ಯಾವಂತ ಯುವಕ ಸೊಪ್ಪು ತರಕಾರಿಗಳನ್ನು ಬೆಳೆದು ವಾರ್ಷಿಕ ಆರು ಲಕ್ಷ ರೂ. ಆದಾಯ ಗಳಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.
ಸೊಪ್ಪು ಬೆಳೆದು ಯಶಸ್ಸು ಕಂಡ ಉದ್ಯಾನ ನಗರಿಯ ಯುವ ರೈತ! - Bangalore North Taluk Yelahanka
ವಿಜಯ ಕುಮಾರ್ ಸೊಪ್ಪು ತರಕಾರಿ ಬೆಳೆದು ವಾರ್ಷಿಕ ಆರು ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ. ಜೊತೆಗೆ ಸ್ವಂತ ಓಮ್ನಿ ಕಾರನ್ನು ಹೊಂದಿದ್ದು, ಆ ಕಾರಿನಲ್ಲೇ ನಗರದ ಬಾಗಲಗುಂಟೆ ಮಾರುಕಟ್ಟೆಯಲ್ಲಿ ಸೊಪ್ಪು ಮಾರಾಟ ಮಾಡುತ್ತಾರೆ.
![ಸೊಪ್ಪು ಬೆಳೆದು ಯಶಸ್ಸು ಕಂಡ ಉದ್ಯಾನ ನಗರಿಯ ಯುವ ರೈತ! A Successful farmer](https://etvbharatimages.akamaized.net/etvbharat/prod-images/768-512-5781853-thumbnail-3x2-hrs.jpg)
ಬೆಂಗಳೂರು ಉತ್ತರ ತಾಲೂಕು ಯಲಹಂಕದ ಹನಿಯೂರು ಗ್ರಾಮದ ವಿಜಯ್ ಕುಮಾರ್ ಸೊಪ್ಪು ತರಕಾರಿ ಬೆಳೆದು ಯಶಕಂಡ ಯುವಕ. ಎಮ್ಮೆಸ್ಸಿ ಓದುತ್ತಿದ್ದ ವಿಜಯ ಕುಮಾರ್ ಪದವಿ ಪೂರ್ಣಗೊಳಿಸಲಾಗದೆ ತಂದೆಯಿಂದ ಬಳುವಳಿಯಾಗಿ ಬಂದ ಬೇಸಾಯವನ್ನು ವೃತ್ತಿಯಾಗಿ ಮುಂದುವರೆಸಿದ್ರು. ಆರಂಭದಲ್ಲಿ ಆಲೂಗಡ್ಡೆ ಹೂಕೋಸು ಬೆಳೆದು ಕೈಸುಟ್ಟುಕೊಂಡ ಇವರು, ಬಳಿಕ ಸೊಪ್ಪು ತರಕಾರಿ ಬೆಳೆಯಲು ಆರಂಭಿಸಿದ್ರು. ಹೀಗೆ ಆರಂಭಿಸಿದ ಸೊಪ್ಪು ತರಕಾರಿ ವಿಜಯ ಕುಮಾರ್ ಅವರ ಕೈ ಹಿಡಿಯಿತು. ಪರಿಣಾಮ ವಿಜಯ ಕುಮಾರ್ ಇಂದು ಸೊಪ್ಪು ತರಕಾರಿ ಬೆಳೆದು ವಾರ್ಷಿಕ ಆರು ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ. ಜೊತೆಗೆ ಸ್ವಂತ ಓಮ್ನಿ ಕಾರನ್ನು ಹೊಂದಿದ್ದು ಆ ಕಾರಿನಲ್ಲೇ ನಗರದ ಬಾಗಲಗುಂಟೆ ಮಾರುಕಟ್ಟೆಯಲ್ಲಿ ಸೊಪ್ಪು ಮಾರಾಟ ಮಾಡುತ್ತಾರೆ.
ರೈತ ವಿಜಯ ಕುಮಾರ್ ತಮಗಿರುವ ಒಂದುವರೆ ಎಕರೆ ಜಮೀನಿನಲ್ಲಿ ಪಾಲಕ್, ದಂಟು, ಮೆಂತ್ಯ ಸೇರಿ ವಿವಿಧ ತರಕಾರಿ ಸೇರಿದಂತೆ ಐದು ಬಗೆಯ ಸೋಪ್ಪು ಬೆಳೆಯುತ್ತಾರೆ. ಒಂದೂವರೆ ಎಕರೆಯನ್ನು 20 ಗುಂಟೆಗೆ ಒಂದರಂತೆ ಮೂರು ಭಾಗಗಳಾಗಿ ವಿಂಗಡಿಸಿ 20 ದಿನಕ್ಕೆ ಸೊಪ್ಪು ಕಟಾವಿಗೆ ಬರುವಂತೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಪ್ರತಿದಿನ 800 ಕಟ್ಟುಗಳಷ್ಟು ಸೊಪ್ಪು ಮಾರಾಟ ಮಾಡುವ ಇವರು, ಪ್ರತಿ ಕಟ್ಟಿಗೆ 10 ರೂಪಾಯಿ ಸಿಕ್ಕರೆ ಒಳ್ಳೆಯ ಲಾಭವೆಂದು ಹೇಳುತ್ತಾರೆ.