ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೊದಲ ಬಾರಿ ಅಧಿಕಾರಕ್ಕೆ ಬಂದಾಗ ಸಚಿವರೊಬ್ಬರ ರಾಸಲೀಲೆ ವಿಡಿಯೋ ಹೊರಬಿದ್ದು, ಸರ್ಕಾರ ತಲೆ ತಗ್ಗಿಸುವಂತಾಗಿತ್ತು. ಇದೀಗ ಮತ್ತೆ ಅಂತಹದ್ದೇ ಸನ್ನಿವೇಶ ಎದುರಾಗಿದೆ. ಎರಡನೇ ಬಾರಿ ಸಿಎಂ ಆಡಳಿತ ನಡೆಸುವ ವೇಳೆಯಲ್ಲಿ ಮತ್ತೊಬ್ಬ ಸಚಿವರ ವಿಡಿಯೋ ಬೆಳಕಿಗೆ ಬಂದಿದ್ದು, ಯಡಿಯೂರಪ್ಪ ಸರ್ಕಾರಕ್ಕೆ ಮುಜುಗರವನ್ನುಂಟು ಮಾಡಿದೆ.
2008 ರಲ್ಲಿ ಮೊದಲ ಬಾರಿ ಬಿಜೆಪಿ ಅಧಿಕಾರದ ಗದ್ದುಗೆ ಏರಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ತವರು ಜಿಲ್ಲೆಯ ಸಂಪುಟ ಸಹೋದ್ಯೋಗಿ ಹರತಾಳು ಹಾಲಪ್ಪ ರಾಸಲೀಲೆ ಆರೋಪಕ್ಕೆ ಸಿಲುಕಿದ್ದರು. ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪಕ್ಕೆ ಸಿಲುಕಿದ್ದರು. ಪತ್ರಿಕೆಯೊಂದರ ಮುಖಪುಟದಲ್ಲಿ ಈ ಸುದ್ದಿ ಹಾಲಪ್ಪ ಅವರ ಹೆಸರಿಲ್ಲದೆ ಪರೋಕ್ಷವಾಗಿ ಹಾಲಪ್ಪರನ್ನೇ ಉಲ್ಲೇಖಿಸಿ ಪ್ರಕಟಿಸಲಾಗಿತ್ತು. ಇದರಿಂದ ಸರ್ಕಾರ ಹಾಗೂ ಪಕ್ಷ ತೀವ್ರ ಮುಜುಗರಕ್ಕೆ ಸಿಲುಕಿತ್ತು. ಅಂದೇ ಹಾಲಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಇದನ್ನೂ ಓದಿ: ಸಚಿವ ಜಾರಕಿಹೊಳಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ಕಬ್ಬನ್ ಪಾರ್ಕ್ ಠಾಣೆಗೆ ಪ್ರಕರಣ ವರ್ಗಾವಣೆ
ನಂತರ 2009 ರ ನವೆಂಬರ್ 26 ರಂದು ತಮ್ಮ ಪತ್ನಿಯ ಮೇಲೆ ಸಚಿವ ಹಾಲಪ್ಪ ಅತ್ಯಾಚಾರ ನಡೆಸಿದ್ದಾರೆ ಎಂದು ಹಾಲಪ್ಪರ ಸ್ನೇಹಿತ ವೆಂಕಟೇಶ ಮೂರ್ತಿ 2010 ರ ಮೇ ತಿಂಗಳಿನಲ್ಲಿ ದೂರು ಸಲ್ಲಿಕೆ ಮಾಡಿದ್ದರು. ಆದರೆ 2017ರಲ್ಲಿ ಹಾಲಪ್ಪಗೆ ಈ ಕೇಸ್ನಲ್ಲಿ ಕ್ಲೀನ್ ಚಿಟ್ ಸಿಕ್ಕಿತ್ತು. ಈ ಪ್ರಕರಣದಿಂದಾಗಿ ಹಾಲಪ್ಪ ಕೆಲ ಕಾಲ ರಾಜಕೀಯ ಅಜ್ಞಾತವಾಸವನ್ನೂ ಅನುಭವಿಸಬೇಕಾಯಿತು. ರಾಜಕೀಯ ಮುನ್ನೆಲೆಯಲ್ಲಿರಬೇಕಿದ್ದ ಹಾಲಪ್ಪ ಈಗ ತೆರೆಮರೆಗೆ ಸರಿದಿದ್ದಾರೆ.
ಈಗ ಯಡಿಯೂರಪ್ಪ ನೇತೃತ್ವದಲ್ಲಿ ಮತ್ತೆ ಅಧಿಕಾರಕ್ಕೆ ಬಂದಿದ್ದು, ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ಎರಡನೇ ಬಾರಿಗೆ ಸರ್ಕಾರ ಮುನ್ನಡೆಸುತ್ತಿದ್ದಾರೆ. ಈಗಲೂ ಹಳೆಯ ಘಟನೆಯಂತಹ ಪ್ರಕರಣ ಮರುಕಳಿಸಿದೆ. ಅಂದು ಹಾಲಪ್ಪ ಆದರೆ ಇಂದು ರಮೇಶ್ ಜಾರಕಿಹೊಳಿ.