ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿರುವ ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲಗ ಖ್ಯಾತಿಯ ಗಿರಿಜಾ ಸಿದ್ಧಿ 'ಮೈಸೂರು ಹುಲಿಯಾ' ಎಂಬ ಹಾಡನ್ನು ಹಾಡಿದ್ದಾರೆ. ಎಪ್ಪತ್ತೈದನೇ ವಸಂತಕ್ಕೆ ಕಾಲಿಟ್ಟಿರುವ ರಾಜಕೀಯ ಧುರೀಣ ಸಿದ್ದರಾಮಯ್ಯ ಅವರ ಬಗ್ಗೆ ರಚಿಸಲಾದ ಅಪರೂಪದ ಹಾಡಿಗೆ ಗಾಯಕಿ ಗಿರಿಜಾ ಸಿದ್ಧಿ ಕಂಠದಾನ ಮಾಡಿದ್ದಾರೆ.
ಸಲಗ ಚಿತ್ರದ ಟಿಣಿಂಗ ಮಿಣಿಂಗ ಟಿಶ್ಯಾ ಹಾಡಿನ ಮೂಲಕ ಮನೆಮಾತಾಗಿದ್ದ ಗಿರಿಜಾ ಇದೇ ಮೊದಲ ಬಾರಿಗೆ ಜನಪದ ಶೈಲಿಯಲ್ಲಿ ಹಾಡನ್ನು ಹಾಡಿದ್ದಾರೆ. ಸಂಗೀತ ನಿರ್ದೇಶಕ ವೀರ್ ಸಮರ್ಥ್ ಈ ಹಾಡಿಗೆ ಸಂಗೀತ ನೀಡಿದ್ದು, ಸಿನಿಮಾ ಶೈಲಿಯಲ್ಲಿ ಹಾಡು ಮೂಡಿಬಂದಿದೆ. ಸಿದ್ದರಾಮಯ್ಯನವರ ಸಾಧನೆಯ ವರ್ಣನೆ ಹೊಂದಿರುವ ಈ ಹಾಡಿಗೆ ಜೇಮ್ಸ್ ಖ್ಯಾತಿಯ ಚೇತನ್ ಕುಮಾರ್ ಅವರು ಸಾಹಿತ್ಯ ಬರೆದಿದ್ದಾರೆ. ಕೈ ಹಿಡಿಯೋ ಕೈ ಸಿದ್ದರಾಮಯ್ಯ ಎನ್ನುತ್ತ ಶುರುವಾಗುವ ಈ ಹಾಡನ್ನು ಪುಲಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸಮೂರ್ತಿಯವರು ನಿರ್ಮಾಣ ಮಾಡಿದ್ದಾರೆ.