ಕರ್ನಾಟಕ

karnataka

ETV Bharat / state

ಫುಟ್ಬಾಲ್ ಚರ್ಚೆ ಮಧ್ಯೆ ಏಕಾಏಕಿ ಪ್ರವೇಶಿಸಿದ ಕಬಡ್ಡಿ: ನಗೆಗಡಲಲ್ಲಿ ತೇಲಿದ ಪರಿಷತ್ ಕಲಾಪ - ಫುಟ್ಬಾಲ್ ಕ್ರೀಡೆ ಕುರಿತು ಗಂಭೀರ ಚರ್ಚೆ

ವಿಧಾನ ಪರಿಷತ್ ಕಲಾಪದಲ್ಲಿ ಇಂದು ಫುಟ್ಬಾಲ್ ಕ್ರೀಡೆ ಸಂಬಂಧ ನಡೆದ ಗಂಭೀರ ಚರ್ಚೆ ನಡುವೆ ಕಬಡ್ಡಿ ನುಸುಳುವ ಮೂಲಕ ಇಡೀ ಸದನವನ್ನು ನಗೆಗಡಲಲ್ಲಿ ತೇಲುವಂತೆ ಮಾಡಿತು.

assembly session

By

Published : Oct 12, 2019, 2:34 PM IST

ಬೆಂಗಳೂರು:ವಿಧಾನ ಪರಿಷತ್ ಕಲಾಪದಲ್ಲಿ ಇಂದು ಫುಟ್ಬಾಲ್ ಕ್ರೀಡೆ ಸಂಬಂಧ ನಡೆದ ಗಂಭೀರ ಚರ್ಚೆ ನಡುವೆ ಕಬಡ್ಡಿ ನುಸುಳುವ ಮೂಲಕ ಇಡೀ ಸದನವನ್ನು ನಗೆಗಡಲಲ್ಲಿ ತೇಲುವಂತೆ ಮಾಡಿತು.

ಕಾಂಗ್ರೆಸ್ ಸದಸ್ಯ ಕೆ .ಗೋವಿಂದರಾಜು ಅವರು ಪಿಫಾ ಅಸೋಸಿಯೇಷನ್ ಸದಸ್ಯತ್ವ ಪಡೆದಿರುವ ಸಂಬಂಧ ಪಕ್ಷ ಭೇದ ಮರೆತು ಎಲ್ಲ ಸದಸ್ಯರು ಅಭಿನಂದನೆ ಸಲ್ಲಿಸಿದರು. ಸಾಲು ಸಾಲಾಗಿ ಸದಸ್ಯರೆಲ್ಲ ಅಭಿನಂದನೆ ಸಲ್ಲಿಸುವ ಸಂದರ್ಭ ಜೆಡಿಎಸ್ ಹಿರಿಯ ಸದಸ್ಯರಾದ ಬಸವರಾಜ ಹೊರಟ್ಟಿ ಫುಟ್ಬಾಲ್ ಜೊತೆ ರಾಜ್ಯದಲ್ಲಿ ಕಬಡ್ಡಿ ಕೂಡಾ ಜನಪ್ರಿಯತೆ ಪಡೆಯಬೇಕು. ಇದು ಕೂಡ ಸಾಕಷ್ಟು ಜನಪ್ರಿಯವಾದ ಕ್ರೀಡೆಯಾಗಿದೆ ಎಂದು ವಿಚಾರ ಪ್ರಸ್ತಾಪಿಸಿದರು.

ಈ ವೇಳೆ, ಸದನಕ್ಕೆ ಅದಾಗ ತಾನೇ ಆಗಮಿಸಿದ್ದ ಕಾಂಗ್ರೆಸ್ ಸದಸ್ಯ ಸಿಎಂ ಇಬ್ರಾಹಿಂ ಎದ್ದು ನಿಂತು ತಮ್ಮ ಎಂದಿನ ಹಾಸ್ಯ ಶೈಲಿಯಲ್ಲಿ ಬಿಜೆಪಿಯವರು ಕಬ್ಬಡಿಯಲ್ಲಿ ಫೇಮಸ್ಸು, 17 ಜನರನ್ನು ಎಳೆದುಕೊಂಡು ಹೋಗಿದ್ದಾರೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಆರ್. ಅಶೋಕ್, ನಮ್ಮ ಕಬಡ್ಡಿ ಈಗ ಆರಂಭವಾಗಿದೆ. ನಮ್ಮದು ಪ್ರೋ ಕಬಡ್ಡಿ, ಭಾರಿ ಫಾಸ್ಟ್​ ಎಂದು ಉತ್ತರಿಸಿದ್ರು, ಇಷ್ಟಕ್ಕೆ ಸುಮ್ಮನಾಗದೇ ಮಧ್ಯೆ ಪ್ರವೇಶಿಸಿದ ಐವಾನ್ ಡಿಸೋಜಾ ಕಬಡ್ಡಿ ರಾಜಕಾರಣಿಗಳ ಪ್ರೀತಿಯ ಆಟ ಎಂದು ವ್ಯಂಗ್ಯವಾಡಿದ್ರು.

ಅಲ್ಲಿಗೆ ಈ ವಿಚಾರವನ್ನು ಮುಗಿಸಿ ಮುಂದೆ ತೆರಳುವ ಸಂದರ್ಭ ಸದನ ಪ್ರವೇಶ ಮಾಡಿದ ಕ್ರೀಡಾ ಸಚಿವ ಕೆ.ಎಸ್. ಈಶ್ವರಪ್ಪನವರು ಗೋವಿಂದರಾಜು ಅವರಿಗೆ ಅಭಿನಂದನೆ ಸಲ್ಲಿಸಿ, ಗೋವಿಂದರಾಜು ಉತ್ತಮ ಕ್ರೀಡಾಪಟು. ಅವರ ಸಲಹೆ ಪಡೆದು ನಾವು ಕ್ರೀಡಾ ಪ್ರಗತಿಗೆ ಮುಂದುವರಿಯುತ್ತೇವೆ. ಹಿಂದೆ ಇವರ ಸರ್ಕಾರ ಇದ್ದಾಗ ಅವರನ್ನು ಕ್ರೀಡಾ ಸಚಿವರನ್ನಾಗಿ ಮಾಡಿ ಎಂದು ಸಲಹೆ ಕೊಟ್ಟಿದ್ದೆ ಯಾಕೆ ಆಗಿಲ್ವೋ ಗೊತ್ತಾಗ್ಲಿಲ್ಲ ಎಂದರು.

ಅದಕ್ಕೆ ಮರಿತಿಬ್ಬೇಗೌಡರು ನೀವು ಆಗಲೇ 17 ಮಂದಿಯನ್ನು ಕರೆದುಕೊಂಡು ಹೋಗಿದ್ದೀರಿ, ಇವರನ್ನು 18 ನೇಯವರನ್ನಾಗಿ ಕರೆದುಕೊಂಡು ಹೋಗಿ ಸಚಿವರನ್ನಾಗಿ ಮಾಡಿ ಎಂದು ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ ಅದಕ್ಕೇನು ಅವರೂ ಬರಲಿ, ಅಲ್ಲದೇ ಮುಸ್ಲಿಂ ಕೋಟಾದಲ್ಲಿ ಸಿ.ಎಂ. ಇಬ್ರಾಹಿಂ ಕೂಡ ಬಂದು ಸಚಿವರಾಗಲಿ ಎಂದು ಹೇಳುತ್ತಿದ್ದಂತೆ ಸದನದಲ್ಲಿ ಕೊಂಚ ಗದ್ದಲ ಉಂಟಾಯಿತು. ತಕ್ಷಣ ಎಚ್ಚರಗೊಂಡ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ವಿಷಯವನ್ನು ಬೇರೆಡೆಗೆ ತಿರುಗಿಸಿದರು.

ಕಬ್ಬು ಬೆಳೆಗಾರರ ಸಮಸ್ಯೆಗೆ ಸ್ಪಂದಿಸಿ ಸದನದ ಆರಂಭದಲ್ಲಿ ವಿಚಾರ ಪ್ರಸ್ತಾಪಿಸಿದ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡರು, ಕಬ್ಬು ಬೆಳೆಗಾರರಿಗೆ ನಷ್ಟವಾಗುತ್ತಿದೆ. ಆ ರೈತರ ಬೆಂಬಲಕ್ಕೆ ಬರಬೇಕು. ನೆರೆಯಿಂದ ಸಂಕಷ್ಟಕ್ಕೀಡಾಗಿರುವ ರೈತರಿಗೆ ಇರುವ ಕಬ್ಬನ್ನು ಕಟಾವು ಮಾಡಿ, ಕಾರ್ಖಾನೆಗೆ ಕೊಂಡೊಯ್ಯಲು ಅವಕಾಶ ಮಾಡಿಕೊಡಿ ಎಂದು ಮರಿತಿಬ್ಬೇಗೌಡರು ಮನವಿ ಮಾಡಿದರು.

ABOUT THE AUTHOR

...view details