ಕರ್ನಾಟಕ

karnataka

ETV Bharat / state

ಬೆಂಗಳೂರು: ಸತ್ತಂತೆ ಬಿಂಬಿಸಿಕೊಂಡು ತಲೆಮರೆಸಿಕೊಂಡಿದ್ದ ರೌಡಿ ಕೊನೆಗೂ ಅರೆಸ್ಟ್​ - ತಲೆಮರೆಸಿಕೊಂಡಿದ್ದ ರೌಡಿ ಬಂಧನ

ಎರಡು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್​ ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ತಲೆಮರೆಸಿಕೊಂಡಿದ್ದ ರೌಡಿ ಬಂಧನ
ತಲೆಮರೆಸಿಕೊಂಡಿದ್ದ ರೌಡಿ ಬಂಧನ

By ETV Bharat Karnataka Team

Published : Nov 21, 2023, 11:33 AM IST

Updated : Nov 21, 2023, 9:41 PM IST

ಬೆಂಗಳೂರು :ಮೃತಪಟ್ಟಿರುವುದಾಗಿ ಬಿಂಬಿಸಿಕೊಂಡು ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ರೌಡಿ ಆಸಾಮಿಯನ್ನು ಸಿಸಿಬಿ‌ ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ವೈಟ್ ಫೀಲ್ಡ್ ಠಾಣಾ ವ್ಯಾಪ್ತಿಯ ರೌಡಿಶೀಟರ್​ ಮಲ್ಲಿಕಾರ್ಜುನ ಅಲಿಯಾಸ್ ಮಲ್ಲಿ ಬಂಧಿತ ಆರೋಪಿ.

ಮತ್ತೋರ್ವ ಕುಖ್ಯಾತ ರೌಡಿ ಕಾಡುಬೀಸನಹಳ್ಳಿ ಸೋಮನ ಕಾರು ಚಾಲಕನ ಹತ್ಯೆ ಪ್ರಕರಣದ ಆರೋಪಿಯಾಗಿದ್ದ ಮಲ್ಲಿಕಾರ್ಜುನ, ಬಳಿಕ ರಾಜಾನುಕುಂಟೆ ವ್ಯಾಪ್ತಿಯಲ್ಲಿಯೂ ಒಂದು ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಮನೆ ಬಳಿ ಹೋಗಿದ್ದ ಪೊಲೀಸರು ಕುಟುಂಬಸ್ಥರು, ಗೆಳೆಯರು, ಪರಿಚಿತರನ್ನು ವಿಚಾರಿಸಿದಾಗ ಆತ ಮೃತಪಟ್ಟಿದ್ದಾನೆ ಎಂದಿದ್ದರು. ಅಲ್ಲದೇ ಮಲ್ಲಿಕಾರ್ಜುನ ಮೃತಪಟ್ಟಿರುವ ಕೆಲವು ದಾಖಲೆಗಳನ್ನು ಕುಟುಂಬಸ್ಥರು ತೋರಿಸಿದ್ದರು. ಅದರೂ ಸಹ ಅನುಮಾನಗೊಂಡ ಸಿಸಿಬಿ‌ ಪೊಲೀಸರು ತಲಾಶ್ ನಡೆಸಿ ಊರೂರು ಸುತ್ತುತ್ತ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಎರಡು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಮಲ್ಲಿಕಾರ್ಜುನ, ಬಂಧನಕ್ಕೆ ಒಳಗಾಗಿ ಜಾಮೀನು ಪಡೆದು ಹೊರಬಂದು ತಲೆಮರೆಸಿಕೊಂಡಿದ್ದ. ಅಲ್ಲದೆ, ಎರಡು ವರ್ಷಗಳಿಂದ ‘ತಾನು ಸಾವನ್ನಪ್ಪಿರುವುದಾಗಿ’ ಎಲ್ಲೆಡೆ ಬಿಂಬಿಸಿದ್ದ. ಕುಟುಂಬಸ್ಥರು ಸಹ ಮಲ್ಲಿಕಾರ್ಜುನ ಮೃತಪಟ್ಟಿದ್ದಾನೆ ಎಂದು ಹೇಳಿಕೊಂಡಿದ್ದರು. ರೌಡಿ ಪರೇಡ್​​ಗೂ ಹಾಜರಾಗದಿದ್ದಾಗ ಆತನ ಮನೆ ಬಳಿಗೆ ಪೊಲೀಸರು ಹೋದಾಗ ಕುಟುಂಬಸ್ಥರು ಮಲ್ಲಿಕಾರ್ಜುನ ಮೃತಪಟ್ಟಿದ್ದಾನೆ ಎಂದು ಹೇಳಿಕೊಂಡೇ ಬರುತ್ತಿದ್ದರು. ಆದರೆ, ಸೂಕ್ತ ದಾಖಲೆ ನೀಡುತ್ತಿರಲಿಲ್ಲ. ಇತ್ತ ಮಲ್ಲಿಕಾರ್ಜುನ ಚಾಲಕ ವೃತ್ತಿ ಮಾಡಿಕೊಂಡು ಊರೂರು ಸುತ್ತಾಡುತ್ತಿದ್ದ. ಈ ಬಗ್ಗೆ ಅನುಮಾನಗೊಂಡು ಮತ್ತಷ್ಟು ತನಿಖೆ ನಡೆಸಿ, ಆತನ ಮೇಲೆ ನಿಗಾ ವಹಿಸಿ ಬಂಧಿಸಲಾಗಿದೆ. ಸದ್ಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಸಿಸಿಬಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರತ್ಯೇಕ ಪ್ರಕರಣ- ಹೆದ್ದಾರಿ ದರೋಡೆಕೋರ ಬಂಧನ :ನ.15 ರಂದು ಹಾನಗಲ್ ಸಮೀಪದ ಗೆಜ್ಜಿಹಳ್ಳಿ ಬಳಿ 5 ದರೋಡೆಕೋರರು ವಾಹನವನ್ನು ಅಡ್ಡಗಟ್ಟಿ ಕೊಲೆ ಮಾಡುವುದಾಗಿ ಹೆದರಿಸಿ ಸೂಲಿಗೆ ಮಾಡಿದ್ದ ಆರೋಪಿಗಳನ್ನು ಹಾವೇರಿ ಜಿಲ್ಲೆ ಹಾನಗಲ್ ಪೊಲೀಸರು ಹೆಡೆಮುರಿ ಕಟ್ಟಿದ್ದರು. ಬಂಧಿತರಿಂದ 1 ಲಕ್ಷ ನಗದು, ಮೊಬೈಲ್ ಹಾಗೂ ಮೋಟಾರ್​ ಸೈಕಲ್ ವಶಪಡಿಸಿಕೊಳ್ಳಲಾಗಿದೆ. ಪ್ರವೀಣ ಸಾತಪತಿ (31), ರಾಕೇಶ ಬಾರ್ಕಿ (22), ಜಗದೀಶ್ (21), ಅಣ್ಣಪ್ಪ (22), ಗಣೇಶ (21) ಆರೋಪಿಗಳೆಂದು ಗುರುತಿಸಲಾಗಿದೆ. ಇರ್ಷಾದ್ ಮತ್ತು ಗೌಸ್ ಮೊಹಿನುದ್ದಿನ್ ಎಂಬುವವರು ತರಕಾರಿ ವ್ಯಾಪಾರಸ್ಥರಾಗಿದ್ದು, ಇವರಿಬ್ಬರಿಂದ ನಗದು ಹಾಗೂ ಮೊಬೈಲ್ ಕಸಿದುಕೊಂಡು ಖದೀಮರು ಪರಾರಿಯಾಗಿದ್ದರು. ಕೃತ್ಯ ನಡೆದ 8 ಗಂಟೆಗಳಲ್ಲೇ ಮಿಂಚಿನ ಕಾರ್ಯಾಚರಣೆ ನಡೆಸಿ ಪ್ರಕರಣವನ್ನು ಭೇದಿಸಿರುವ ಹಾನಗಲ್ ಪೊಲೀಸರ ಈ ಕರ್ತವ್ಯಕ್ಕೆ ನೂತನ ಎಸ್ಪಿ ಅಂಶುಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ :ಹೆದ್ದಾರಿಯಲ್ಲಿ ವಾಹನ ಅಡ್ಡಗಟ್ಟಿ ದರೋಡೆ: ಮಿಂಚಿನ ಕಾರ್ಯಾಚರಣೆಯಿಂದ 8 ತಾಸಲ್ಲೇ ಆರೋಪಿಗಳ ಬಂಧನ

Last Updated : Nov 21, 2023, 9:41 PM IST

ABOUT THE AUTHOR

...view details