ಬೆಂಗಳೂರು:ರಾಜ್ಯ ವಿಧಾನಮಂಡಲದ ಅಧಿವೇಶನ ಬೆಳಗಾವಿಯಲ್ಲಿ ಡಿಸೆಂಬರ್ 19 ರಿಂದ ಆರಂಭವಾಗಲಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಹಣಾಹಣಿ ನಡೆಯುವುದು ನಿಶ್ಚಿತವಾಗಿದೆ. ಮುಂದಿನ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದು ಪ್ರಮುಖ ರಾಜಕೀಯ ಪಕ್ಷಗಳು ಈಗಾಗಲೇ ಬೀದಿಗಿಳಿದಿದ್ದು, ಈ ಬಾರಿಯ ಅಧಿವೇಶನವೂ ಕೂಡ ಮತ್ತೊಂದು ಕಾಳಗಕ್ಕೆ ವೇದಿಕೆಯಾಗಲಿದೆ.
ವೋಟರ್ ಐಡಿ ಹಗರಣ ಕೆಣಕಲಿದೆ ಪ್ರತಿಪಕ್ಷ:ವೋಟರ್ ಐಡಿ ಹಗರಣ, ಮತದಾರರ ಪಟ್ಟಿ ಪರಿಷ್ಕರಣೆಯ ನೆಪದಲ್ಲಿ ದೊಡ್ಡ ಸಂಖ್ಯೆಯ ಮತದಾರರನ್ನು ಪಟ್ಟಿಯಿಂದ ಕೈ ಬಿಟ್ಟಿರುವುದು ಸೇರಿದಂತೆ ಹಲವು ವಿಷಯಗಳು ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಬಾಣ ಪ್ರಯೋಗಿಸಲು ಅಸ್ತ್ರವಾಗಲಿವೆ. ಚಿಲುಮೆ ಸಂಸ್ಥೆಯ ಮೂಲಕ ನಡೆದ ಈ ಹಗರಣದಲ್ಲಿ ಹಲವು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಅದರೂ ಅದರ ಹಿಂದೆ ಸರ್ಕಾರದಲ್ಲಿರುವ ಪ್ರಮುಖ ಸಚಿವರೊಬ್ಬರು ಭಾಗೀದಾರರು ಎಂದು ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಮುಗಿಬೀಳಲಿವೆ ಎನ್ನಲಾಗಿದೆ.
ಕಬ್ಬು ಬೆಳೆಗಾರರಿಗೆ ಸಿಗದ ನ್ಯಾಯಬೆಲೆ:ಇದೇ ರೀತಿ ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ ಭಯೋತ್ಪಾದಕತೆಯನ್ನು ಸೃಷ್ಟಿಸಿದ್ದು ಬಿಜೆಪಿಯ ಷಡ್ಯಂತ್ರ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾಡಿದ ಆರೋಪ, ಆಡಳಿತಾರೂಢ ಬಿಜೆಪಿಗೆ ಪ್ರಬಲ ಅಸ್ತ್ರವಾಗಿ ಸಿಕ್ಕಿದಂತಾಗಿದೆ. ಈ ಮಧ್ಯೆ ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು ನ್ಯಾಯಯುತ ಬೆಲೆ ನೀಡುತ್ತಿಲ್ಲ ಎಂಬ ವಿಷಯವನ್ನು ಹಿಡಿದುಕೊಂಡು ಪ್ರತಿಪಕ್ಷಗಳು ಸರ್ಕಾರವನ್ನೂ ಇಕ್ಕಟ್ಟಿಗೆ ಸಿಲುಕಿಸಲಿವೆ.
ಗಡಿ ವಿವಾದವೂ ಸದ್ದು: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದವೂ ಬೆಳಗಾವಿ ಅಧಿವೇಶನದಲ್ಲಿ ಸದ್ದು ಮಾಡಲಿದೆ. ವಿವಾದದ ಬಗ್ಗೆ ಉಭಯ ರಾಜ್ಯಗಳ ನಾಯಕರ ಜತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚರ್ಚಿಸಿದ್ದು, ಈ ಹಿನ್ನೆಲೆಯಲ್ಲಿ ಸದರಿ ವಿವಾದ ತಾತ್ಕಾಲಿಕವಾಗಿ ತಣ್ಣಗಾಗಿದೆ ಆದರೂ,ಅಧಿವೇಶನದ ಮೂಲಕ ಗಡಿ ವಿವಾದ ಕೆದಕುತ್ತಿರುವ ಮಹಾರಾಷ್ಟ್ರಕ್ಕೆ ಎಚ್ಚರಿಕೆಯ ಸಂದೇಶ ರವಾನೆ ಆಗಲಿದೆ ಎಂಬುದು ಮೂಲಗಳು ತಿಳಿಸಿವೆ.