ಬೆಂಗಳೂರು: ಖ್ಯಾತ ಹರಿಕಥಾ ವಿದ್ವಾಂಸ ಗುರುರಾಜುಲು ನಾಯ್ಡು ಪುತ್ರಿ ಶೋಭಾ ನಾಯ್ಡು ನಗರದಲ್ಲಿ ಇಂದು ವಿಧಿವಶರಾದರು. ಮೂರು ದಶಕಗಳಿಗೂ ಹೆಚ್ಚು ಕಾಲ ಹರಿಕಥೆ ಸೇವೆಸಲ್ಲಿಸಿದ ಶೋಭಾ ನಾಯ್ಡು ವೃತ್ತಿಪರ ಹರಿಕಥಾ ವಿದ್ವಾಂಸರಾಗಿರಲಿಲ್ಲ. ಆದರೆ, ಹವ್ಯಾಸಕ್ಕಾಗಿ ಆಗಾಗ ಸಮಯ ಸಿಕ್ಕಾಗ ಹರಿಕಥೆ ನಡೆಸಿಕೊಡುವ ಕಾರ್ಯ ಮಾಡುತ್ತಿದ್ದರು. ತಂದೆ ಗುರುರಾಜುಲು ನಾಯ್ಡು ಅವರಿಗೆ ಪುತ್ರಿ ಹರಿಕಥೆ ಮಾಡುವುದು ಅಷ್ಟಾಗಿ ಇಷ್ಟವಿರಲಿಲ್ಲ. ಈ ಹಿನ್ನೆಲೆ ಪುತ್ರಿಯನ್ನು ಬೇರೆ ಉದ್ಯೋಗದತ್ತ ಮುಖ ಮಾಡುವಂತೆ ಮಾಡಿದ್ದರು.
ಭಾರತೀಯ ವಿಮಾನ ಕಾರ್ಖಾನೆಯಲ್ಲಿ ಉದ್ಯೋಗಿಯಾಗಿದ್ದ ಶೋಭಾ ನಾಯ್ಡು ಬೆಂಗಳೂರಿನ ಗಾಯತ್ರಿ ನಗರದಲ್ಲಿ ವಾಸವಾಗಿದ್ದರು. ಸಮಯ ಸಿಕ್ಕಾಗೆಲ್ಲಾ ಹರಿಕಥೆ ಮಾಡುತ್ತಾ ನಾಟಕಗಳಲ್ಲಿ ಅಭಿನಯಿಸುತ್ತಾ ಕಲಾಪ್ರಪಂಚದಲ್ಲಿ ತಮ್ಮನ್ನು ಗುರುತಿಸಿಕೊಳ್ಳುವಂತೆ ಮಾಡಿದ್ದರು. ಕಿಡ್ನಿ ಸಮಸ್ಯೆಯಿಂದ ಕೆಲ ದಿನಗಳಿಂದ ಬಳಲುತ್ತಿದ್ದ ಶೋಭಾ ನಾಯ್ಡು ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ನಿಧನರಾಗಿದ್ದಾರೆ.