ಮೈಸೂರು: ರೋಗಿಗೆ ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ ತೋರಿದ್ದು ಹಾಗೂ ವೈದ್ಯಕೀಯ ಅರ್ಹತೆ ಇಲ್ಲದ ವೈದ್ಯರಿಂದ ಚಿಕಿತ್ಸೆ ನೀಡಿಸಿದ ಆಸ್ಪತ್ರೆ ವಿರುದ್ಧ ನೊಂದ ವ್ಯಕ್ತಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆ (KPME) ಪ್ರಾಧಿಕಾರಕ್ಕೆ ನೀಡಿದ್ದ ದೂರಿನನ್ವಯ ತನಿಖೆ ಕೈಗೊಂಡ ಕೆಪಿಎಮ್ಇ ಅಧ್ಯಕ್ಷರು ಆಸ್ಪತ್ರೆಗೆ ಬೀಗಮುದ್ರೆ ಹಾಕುವಂತೆ ಆದೇಶ ಮಾಡಿದ್ದಾರೆ.
ಮೈಸೂರು ನಗರದ ಗೋಕುಲಂನಲ್ಲಿ ಇರುವ ಆದಿತ್ಯ ಅಧಿಕಾರಿ ಆಸ್ಪತ್ರೆಯ ಮುಖ್ಯಸ್ಥ ಹಾಗೂ ವೈದ್ಯ ಡಾ.ಚಂದ್ರಶೇಖರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ತಕ್ಷಣ ಆಸ್ಪತ್ರೆಯಲ್ಲಿರುವ ರೋಗಿಗಳನ್ನು ಸ್ಥಳಾಂತರಿಸಿ, ಆಸ್ಪತ್ರೆಯನ್ನು ಬೀಗ ಮುದ್ರೆಗೊಳಿಸಬೇಕೆಂದು ಮುಖ್ಯ ಜಾಗೃತ ಅಧಿಕಾರಿಗಳು ಜಾಗೃತಿ ಕೋಶ ಬೆಂಗಳೂರು, ಇವರ ನಿರ್ದೇಶನದಂತೆ ಮೈಸೂರಿನ ಸಹ ನಿರ್ದೇಶಕರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆ ಮೈಸೂರು, ಇವರು ತನಿಖಾ ವರದಿಯಲ್ಲಿ ಈ ಆದೇಶ ಮಾಡಿದ್ದಾರೆ.
ಘಟನೆಯ ಹಿನ್ನೆಲೆ:ದೂರುದಾರ ರವಿಗೌಡ ಎಂಬುವವರ ಅಪಘಾತದಲ್ಲಿ ಗಾಯಗೊಂಡ ಅವರ ಚಿಕ್ಕಪ್ಪ ಶಿವಣ್ಣ ಎಂಬುವವರನ್ನು ಆದಿತ್ಯ ಅಧಿಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಇವರಿಗೆ ಚಿಕಿತ್ಸೆ ನೀಡುವಾಗ ಸರಿಯಾಗಿ ಚಿಕಿತ್ಸೆ ನೀಡದೇ, ಕುಟುಂಬಸ್ಥರ ಅನುಮತಿ ಪಡೆಯದೇ ವೈದ್ಯರು ನಾಲ್ಕು ಅಪರೇಷನ್ ಮಾಡಿದ್ದರು, ಇದರಿಂದಾಗಿ ರೋಗಿ ಶಿವಣ್ಣ ಸಾವನ್ನಪ್ಪಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ 2017ರಲ್ಲಿ ಈ ಖಾಸಗಿ ಆಸ್ಪತ್ರೆ ವಿರುದ್ಧ ಕೆಪಿಎಮ್ಇ ಜೊತೆಗೆ ಗ್ರಾಹಕರ ನ್ಯಾಯಾಲಯದಲ್ಲಿ ರವಿಗೌಡ ದೂರು ದಾಖಲಿಸಿದ್ದರು.