ಬೆಂಗಳೂರು : ಸನ್ನಡತೆ ಆಧಾರದ ಮೇಲೆ ಬಿಡುಗಡೆ ಆಗಬೇಕಿದ್ದ ಕೈದಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.
ಬಿಡುಗಡೆ ಪಟ್ಟಿಯಲ್ಲಿದ್ದ ಕೈದಿ ಹೃದಯಾಘಾತದಿಂದ ಸಾವು
ಮೃತ ಕೈದಿ 14 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದರು. ಸನ್ನಡತೆ ತೋರಿದ ಆಧಾರದ ಮೇಲೆ ಸ್ವಾತಂತ್ರ್ಯ ದಿನಾಚರಣೆ ವೇಳೆ ಕಾರಾಗೃಹ ಸ್ಥಾಯಿ ಸಲಹಾ ಮಂಡಳಿ 142 ಕೈದಿಗಳ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಇದರಂತೆ ಕಡತವು ಸಂಪುಟ ಸಭೆಯಿಂದ ಅನುಮೋದನೆಗೊಂಡು ರಾಜ್ಯಪಾಲರು ಬಿಡುಗಡೆಗೆ ಗ್ರೀನ್ ಸಿಗ್ನಲ್ ನೀಡಿದ್ದರು.
ಸ್ವಾಮಿ ನಾಯಕ್ (53) ವರ್ಷ ಸಾವನ್ನಪ್ಪಿರುವ ದುದೈರ್ವಿ. ಮೂಲತಃ ಮೈಸೂರಿನವರಾದ ನಾಯಕ್, ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದರು. 14 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದರು. ಸನ್ನಡತೆ ತೋರಿದ ಮೇರೆಗೆ ಸ್ವಾತಂತ್ರ್ಯ ದಿನಾಚರಣೆ ವೇಳೆ ಕಾರಾಗೃಹ ಸ್ಥಾಯಿ ಸಲಹಾ ಮಂಡಳಿ ಸ್ವಾಮಿ ನಾಯಕ್ ಸೇರಿದಂತೆ 142 ಕೈದಿಗಳ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಇದರಂತೆ ಕಡತವು ಸಂಪುಟ ಸಭೆಯಿಂದ ಅನುಮೋದನೆಗೊಂಡು ರಾಜ್ಯಪಾಲರು ಬಿಡುಗಡೆಗೆ ಗ್ರೀನ್ ಸಿಗ್ನಲ್ ನೀಡಿದ್ದರು.
ಬಿಡುಗಡೆಗೆ ರಾಜ್ಯಪಾಲರ ಅಂಕಿತ ಬಿದ್ದ ಹಿನ್ನೆಲೆಯಲ್ಲಿ ಬರುವ ಬುಧವಾರ ಬಿಡುಗಡೆ ಸಮಾರಂಭ ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ, ಮೃತಪಟ್ಟ ಸ್ವಾಮಿ ನಾಯಕ್ ಸೇರಿದಂತೆ ರಾಜ್ಯದ ವಿವಿಧ ಜೈಲುಗಳಿಂದ ಕೈದಿಗಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತಗೊಳಿಸಲಾಗಿತ್ತು. ಕಳೆದ ಐದು ವರ್ಷಗಳಿಂದ ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದ ಸ್ವಾಮಿ ನಾಯಕ್ಗೆ ಇಂದು ಬೆಳ್ಳಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಜೈಲಿನ ಆಸ್ಪತ್ರೆಗೆ ದಾಖಲಿಸಿದಾಗ ಎದೆ ಬಡಿತದಲ್ಲಿ ವ್ಯತ್ಯಾಸ ಕಂಡು ಬಂದಿದೆ. ಈ ಹಿನ್ನಲೆ ಹೆಚ್ಚಿನ ಚಿಕಿತ್ಸೆಗಾಗಿ ಬನ್ನೇರುಘಟ್ಟ ರಸ್ತೆಯ ಜಯದೇವ ಆಸ್ಪತ್ರೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.