ಬೆಂಗಳೂರು : ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಕರ್ನಾಟಕದಲ್ಲಿರುವ ಕುಮಾರಸ್ವಾಮಿ ನೇತೃತ್ವದ ಸರ್ಕಾರವನ್ನು ಪದಚ್ಯುತಗೊಳಿಸಲು ಪಣ ತೊಟ್ಟಿರುವ ಬಿಜೆಪಿ ಹೈಕಮಾಂಡ್ ರಾಜ್ಯದ ಫ್ರಂಟ್ ಲೈನ್ ನಾಯಕರನ್ನು ಸೈಡ್ ಲೈನ್ ಗೆ ಸರಿಸಿ ಹಿಂದುಳಿದ ಸಮುದಾಯದ ನಾಯಕರೊಬ್ಬರನ್ನು ಸಿಎಂ ಹುದ್ದೆಯ ಮೇಲೆ ಕೂರಿಸಲು ಚಿಂತನೆ ನಡೆಸಿದೆ.
ಉನ್ನತ ಮೂಲಗಳ ಪ್ರಕಾರ, ರಾಜ್ಯದ ಮೈತ್ರಿ ಸರ್ಕಾರವನ್ನು ಪದಚ್ಯುತಗೊಳಿಸಿದ ಮೇಲೆ ಕುರುಬ, ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳನ್ನು ಹೊರತುಪಡಿಸಿ ಹಿಂದುಳಿದ ಸಮುದಾಯದ ಬೇರೊಬ್ಬ ನಾಯಕನನ್ನು ಸಿಎಂ ಹುದ್ದೆಯ ಮೇಲೆ ಕೂರಿಸಲು ವರಿಷ್ಠರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಆದರೆ, ಆ ನಾಯಕ ಯಾರು? ಎಂಬುದು ಕುತೂಹಲ ಮೂಡಿಸಿದೆ.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ ಅಧಿಕಾರ ಹಿಡಿಯುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಉನ್ನತ ಮೂಲಗಳು, ಯಡಿಯೂರಪ್ಪ ಅವರನ್ನು ಒಪ್ಪಿಸಿಯೇ ಸಿಎಂ ಹುದ್ದೆಯ ಮೇಲೆ ಹಿಂದುಳಿದ ವರ್ಗಗಳ ನಾಯಕರೊಬ್ಬರನ್ನು ತಂದು ಕೂರಿಸಲಿದೆ ಎಂಬುದು ಆ ಮೂಲಗಳ ಮಾಹಿತಿ. ರಾಜ್ಯದಲ್ಲಿ ಯಡಿಯೂರಪ್ಪ ಅವರು ಪಕ್ಷವನ್ನು ಕಟ್ಟಲು ದುಡಿದಿರುವ ರೀತಿ ಅನನ್ಯವಾದುದು. ಆದರೆ ಪಕ್ಷದ ನಿಯಮಾವಳಿಗಳು ಅವರಿಗೂ ಅನ್ವಯವಾಗಲಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಪರ್ಯಾಯ ಸರ್ಕಾರ ರಚನೆಯಾಗುವ ಕಾಲಕ್ಕೆ ಅವರು ತ್ಯಾಗಕ್ಕೆ ಸಜ್ಜಾಗಲೇಬೇಕು.
ಯಡಿಯೂರಪ್ಪ ಅವರ ತ್ಯಾಗಕ್ಕೆ ಪ್ರತಿಫಲವಾಗಿ ಅವರ ಪುತ್ರ ಬಿ.ವೈ.ರಾಘವೇಂದ್ರ ಅವರನ್ನು ಕೇಂದ್ರ ಮಂತ್ರಿ ಮಂಡಲಕ್ಕೆ ತೆಗೆದುಕೊಳ್ಳಲು ವರಿಷ್ಟರು ನಿರ್ಧರಿಸಿದ್ದಾರೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿ.ವೈ.ರಾಘವೇಂದ್ರ ಅವರು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಅವರಿಂದ ತೀವ್ರ ಪ್ರತಿಸ್ಪರ್ಧೆಯನ್ನು ಎದುರಿಸಿರುವುದು ನಿಜವಾದರೂ ಅಂತಿಮ ಗೆಲುವು ರಾಘವೇಂದ್ರ ಅವರದೇ ಎಂಬುದು ಹೈಕಮಾಂಡ್ ಅಭಿಪ್ರಾಯ.
ವರಿಷ್ಠರು ತರಿಸಿಕೊಂಡಿರುವ ರಹಸ್ಯ ವರದಿಯ ಪ್ರಕಾರ, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿ.ವೈ.ರಾಘವೇಂದ್ರ ಗೆಲುವು ಸಾಧಿಸಲಿದ್ದಾರೆ. ಹೀಗೆ ರಾಘವೇಂದ್ರ ಗೆಲುವು ಸಾಧಿಸಿದರೆ ಮೂರನೇ ಬಾರಿ ಸಂಸದರಾಗಿ ಆಯ್ಕೆಯಾದಂತಾಗಲಿದ್ದು, ಅವರನ್ನೇ ಭವಿಷ್ಯದ ಲಿಂಗಾಯತ ನಾಯಕ ಎಂದು ಪ್ರತಿಬಿಂಬಿಸಲು ಅನುಕೂಲವಾಗುವಂತೆ ಮಾಡಬೇಕು ಎಂಬುದು ವರಿಷ್ಟರ ಸಧ್ಯದ ಲೆಕ್ಕಾಚಾರ.
ಯಡಿಯೂರಪ್ಪ ಅವರ ನಂತರ ಲಿಂಗಾಯತ ನಾಯಕತ್ವಕ್ಕಾಗಿ ಕಾಂಗ್ರೆಸ್ ನಾಯಕ, ಗೃಹ ಸಚಿವ ಎಂ.ಬಿ.ಪಾಟೀಲ್ ತೀವ್ರ ಯತ್ನ ನಡೆಸಿದ್ದು, ಇದಕ್ಕೆ ಅಡ್ಡಗಾಲು ಹಾಕಬೇಕೆಂದರೆ ರಾಘವೇಂದ್ರ ಅವರನ್ನು ಕೇಂದ್ರ ಮಂತ್ರಿ ಮಂಡಲಕ್ಕೆ ತೆಗೆದುಕೊಳ್ಳಬೇಕು ಎಂದು ಮೋದಿ-ಅಮಿತ್ ಶಾ ಗ್ಯಾಂಗು ನಿರ್ಧರಿಸಿದೆ.
ಅಲ್ಲಿಗೆ ರಾಜ್ಯದಲ್ಲಿರುವ ಕುಮಾರಸ್ವಾಮಿ ನೇತೃತ್ವದ ಸರ್ಕಾರವನ್ನು ಪದಚ್ಯುತಗೊಳಿಸುವ ವೇಳೆಗೆ ಯಡಿಯೂರಪ್ಪ ಅವರು ತಮ್ಮ ದಾರಿಗೆ ಅಡ್ಡವಾಗಬಾರದು. ಅದೇ ಕಾಲಕ್ಕೆ ಬಿಜೆಪಿಯ ಬೆನ್ನೆಲುಬಾಗಿರುವ ಲಿಂಗಾಯತ ಸಮುದಾಯ ಕೂಡಾ ತಿರುಗಿ ಬೀಳಬಾರದು ಎಂಬುದು ಈ ಲೆಕ್ಕಾಚಾರದ ಭಾಗ. ಹಾಗೆಯೇ ಕುಮಾರಸ್ವಾಮಿ ಸರ್ಕಾರವನ್ನು ಬೀಳಿಸಲು ಅಗತ್ಯವಾದ ಸಂಖ್ಯಾ ಬಲವನ್ನು ಕ್ರೋಢೀಕರಿಸುವ ವಿಷಯದಲ್ಲಿ ದೆಹಲಿ ವರಿಷ್ಠರು ಈಗಾಗಲೇ ಬಹುಮುಂದೆ ಹೋಗಿದ್ದು, ದೆಹಲಿ ಗದ್ದುಗೆಯ ಮೇಲೆ ಬಿಜೆಪಿ ನೇತೃತ್ವದ ಎನ್.ಡಿ.ಎ ಅಧಿಕಾರಕ್ಕೆ ಬಂದ ಕೂಡಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ನ 20 ಕ್ಕೂ ಹೆಚ್ಚು ಶಾಸಕರು ಕಮಲದ ಕೈ ಹಿಡಿಯಲಿದ್ದಾರೆ. ಹಾಗೆಯೇ ಮುಖ್ಯಮಂತ್ರಿ ಪದವಿಗೆ ಅತ್ಯಂತ ಅನಿರೀಕ್ಷಿತವಾದ ಅಭ್ಯರ್ಥಿಯೊಬ್ಬರು ಬರಲಿದ್ದಾರೆ ಎಂಬುದು ಉನ್ನತ ಮೂಲಗಳ ಮಾಹಿತಿ.