ಬೆಂಗಳೂರು:ಮಾರ್ಚ್ ಬಜೆಟ್ ಮಂಡನೆಗೆ ಸಿಎಂ ಯಡಿಯೂರಪ್ಪ ಈಗಾಗಲೇ ತಯಾರಿ ಆರಂಭಿಸಿದ್ದಾರೆ. ಪ್ರತ್ಯೇಕ ಕೃಷಿ ಬಜೆಟ್ ಮಂಡಿಸುವ ಮೂಲಕ ಹೊಸತನ ಮೆರೆದಿದ್ದ ಯಡಿಯೂರಪ್ಪ ಈ ಬಾರಿ ಮತ್ತೊಂದು ಸಂಪ್ರದಾಯಕ್ಕೆ ಮುನ್ನುಡಿ ಬರೆಯಲಿದ್ದಾರೆ.
ಮಾರ್ಚ್ ಬಜೆಟ್‌ನಲ್ಲಿ ಹೊಸ ಸಂಪ್ರದಾಯ ಮಾರ್ಚ್ 5ರಂದು 2020-21ರ ಆಯವ್ಯಯ ಮಂಡನೆ ವೇಳೆ ಮಕ್ಕಳಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸಲಿದ್ದಾರೆ. ಇದರಲ್ಲಿ ಮಕ್ಕಳ ಅಭಿವೃದ್ಧಿಯ ಬಗೆಗಿನ ಯೋಜನೆಗಳು, ಹಂಚಿಕೆಯಾಗುವ ಅನುದಾನ, ವೆಚ್ಚ ಮಾಡುವ ವಿಧಾನವನ್ನೂ ವಿಶ್ಲೇಷಿಸುವುದು ಸರ್ಕಾರದ ಉದ್ದೇಶ. ಈಗಾಗಲೇ ಪೂರ್ವ ಸಿದ್ಧತೆಗಳು ನಡೆಯುತ್ತಿವೆ. ಈ ಸಂಬಂಧ ಪ್ರತಿ ಇಲಾಖೆಗಳಿಂದ ಮಕ್ಕಳ ಕೇಂದ್ರೀಕೃತ ಯೋಜನೆಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.
ಮಾರ್ಚ್ ಬಜೆಟ್‌ನಲ್ಲಿ ಹೊಸ ಸಂಪ್ರದಾಯ ಮಕ್ಕಳ ಬಜೆಟ್ ಮಂಡಿಸಲಿರುವ ನಾಲ್ಕನೇ ರಾಜ್ಯ:ಸಿಎಂ ಯಡಿಯೂರಪ್ಪ ರಾಜ್ಯದ ಮಕ್ಕಳಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸಿದ್ರೆ, ದೇಶದಲ್ಲಿ ಇಂತಹ ಒಂದು ಪ್ರಯೋಗಕ್ಕೆ ಮುಂದಾದ 4ನೇ ರಾಜ್ಯ ಕರ್ನಾಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಈಗಾಗಲೇ ಕೇರಳ, ಅಸ್ಸೋಂ ಮತ್ತು ಬಿಹಾರ ಪ್ರತ್ಯೇಕ ಮಕ್ಕಳ ಬಜೆಟ್ ಮಂಡಿಸಿವೆ. ಈಗ ಅದೇ ರೀತಿ ಯಡಿಯೂರಪ್ಪ ರಾಜ್ಯದಲ್ಲಿ ಮತ್ತೊಂದು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಿದ್ದಾರೆ.
ಇಲಾಖೆಗಳಿಂದ ಮಾಹಿತಿ ಕಲೆ:ಎಲ್ಲಾ ಇಲಾಖೆಗಳು ಮಕ್ಕಳ ಕೇಂದ್ರಿತ ಯೋಜನೆ, ಕಾರ್ಯಕ್ರಮಗಳ ವಿವರ, ಅನುದಾನ ಹಂಚಿಕೆ, ಖರ್ಚು, ಕಾರ್ಯನೀತಿಯ ಸಮಗ್ರ ಮಾಹಿತಿಯನ್ನು ನೀಡುವಂತೆ ಆರ್ಥಿಕ ಇಲಾಖೆ ಸೂಚಿಸಿದೆ. ಆಯವ್ಯಯದಲ್ಲಿ ಅಳವಡಿಸಬೇಕಾದ ಕಾರ್ಯಕ್ರಮ, ಕಾರ್ಯಯೋಜನೆ, ಅನುದಾನಗಳ ವರ್ಗೀಕರಣ ಮಾಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ನೀಡುವಂತೆ ಆರ್ಥಿಕ ಇಲಾಖೆ ಸೂಚಿಸಿದೆ.
ಏನಿರಲಿದೆ ಮಕ್ಕಳ ಆಯವ್ಯಯದಲ್ಲಿ?:ಮಕ್ಕಳ ಕೇಂದ್ರೀಕೃತ ಯೋಜನೆಗಳನ್ನು ಇದರಲ್ಲಿ ಘೋಷಣೆ ಮಾಡಲು ಉದ್ದೇಶಿಸಲಾಗಿದೆ. ಮಕ್ಕಳ ಅಭಿವೃದ್ಧಿಗೆ ಬೇಕಾದ ಹೆಚ್ಚಿನ ಕಾರ್ಯಕ್ರಮಗಳನ್ನು ಬಜೆಟ್‌ನಲ್ಲಿ ಸೇರಿಸಲಾಗುತ್ತೆ. ಪ್ರಮುಖವಾಗಿ ಮಕ್ಕಳ ಅಪೌಷ್ಠಿಕತೆ, ಮಕ್ಕಳ ಮರಣ, ಹೆಣ್ಣು ಶಿಶು ಹತ್ಯೆ, ಗರ್ಭಪಾತ, ಮಕ್ಕಳನ್ನು ಶಾಲೆಗೆ ಕಳುಹಿಸದಿರುವುದು, ಬಾಲ ಕಾರ್ಮಿಕರ ಸಮಸ್ಯೆ ತಡೆಯುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗುತ್ತದೆ. ಅಪ್ರಾಪ್ತ ಹೆಣ್ಣು ಮಕ್ಕಳ ಬಾಲ್ಯ ವಿವಾಹ, ಶಾಲೆಯಿಂದ ದೂರ ಉಳಿಯದಂತೆ ತಡೆಯುವುದು, ಹೆಣ್ಣು ಮಕ್ಕಳಿಗೆ ಉತ್ತಮ ಆರೋಗ್ಯ, ಶಿಕ್ಷಣ, ತರಬೇತಿ ಮೂಲಕ ಸಬಲೀಕರಣಕ್ಕೆ ಒತ್ತು ನೀಡುವುದು ಈ ಬಜೆಟ್ನ ಆದ್ಯತೆಯಾಗಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.