ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ (ಕೆಎಸ್ಡಿಎಲ್) ಬ್ರಹ್ಮಾಂಡ ಭ್ರಷ್ಟಾಚಾರದ ಕೂಪವಾಗಿದೆಯಾ? ಎಂಬ ಅನುಮಾನ ಉಂಟಾಗಿದೆ. ಇದಕ್ಕೆ ಕಾರಣ ನಿಗಮದ ಅಧ್ಯಕ್ಷ, ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರನ ಬಂಧನಕ್ಕೂ ಮುನ್ನವೇ ಲೋಕಾಯುಕ್ತದಲ್ಲಿ ದಾಖಲಾಗಿದ್ದ ದೂರು. ಟೆಂಡರ್ ವಿಚಾರದಲ್ಲಿ ಭಾರಿ ಪ್ರಮಾಣದ ಗೋಲ್ಮಾಲ್ ನಡೆದಿರುವುದು ಮಾತ್ರವಲ್ಲದೆ, ಕಿಕ್ ಬ್ಯಾಕ್ ಪಡೆಯಲಾಗಿದೆ ಎಂದು ನಿಗಮದ ಆರು ಜನ ಅಧಿಕಾರಿಗಳ ವಿರುದ್ಧ ಕೆಎಸ್ಡಿಎಲ್ ನೌಕರರ ಸಂಘದ ಅಧ್ಯಕ್ಷ ಶಿವಶಂಕರ್ ಅವರು ಕಳೆದ ತಿಂಗಳ ಫೆ 21 ರಂದು ದೂರು ನೀಡಿದ್ದರು.
ಹೌದು, ಕೆಎಸ್ಡಿಎಲ್ಗೆ ಸಂಬಂಧಿಸಿದ ಟೆಂಡರ್ ವಿಚಾರದಲ್ಲಿ ಸರಿಯಾಗಿ ಕಾರ್ಯ ನಿರ್ವಹಿಸದ ಅಧಿಕಾರಿಗಳ ವಿರುದ್ಧ ನೌಕರರ ಸಂಘದ ಅಧ್ಯಕ್ಷ ಶಿವಶಂಕರ್ ಎಂಬುವರು ಒಂದು ತಿಂಗಳ ಹಿಂದೆಯೇ ದೂರು ನೀಡಿರುವುದು ಬಯಲಾಗಿದೆ. ಗುತ್ತಿಗೆದಾರರು ಕೇಳಿದ ಮೊತ್ತಕ್ಕೆ ಟೆಂಡರ್ಗೆ ಅನುಮೋದನೆ ನೀಡಿ, ಕೋಟಿ ಕೋಟಿ ರೂ. ಹಣ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಕೆಎಸ್ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಸೇರಿದಂತೆ 6 ಜನ ಅಧಿಕಾರಿಗಳ ವಿರುದ್ಧ ಶಿವಶಂಕರ್ ದೂರು ನೀಡಿದ್ದಾರೆ.
ಲೋಕಾಯುಕ್ತದಿಂದ ತನಿಖೆ ಚುರುಕು: ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಅವರ ಪುತ್ರ ಪ್ರಶಾಂತ್ ಮನೆ ಮೇಲೆ ದಾಳಿ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ದಾಳಿ ವೇಳೆ ವಶಕ್ಕೆ ಪಡೆದಿರುವ ಕಡತಗಳ ಪರಿಶೀಲನೆ ಆರಂಭಿಸಿದ್ದು, ವಿರೂಪಾಕ್ಷಪ್ಪ ಕೆಎಸ್ಡಿಎಲ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿನ ಎಲ್ಲಾ ಟೆಂಡರ್ ಕಡತಗಳ ಪರಿಶೀಲನೆ ಆರಂಭವಾಗಿದೆ.