ಬೆಂಗಳೂರು : ಹಾಸನ ಜಿಲ್ಲಾ ಬಿಜೆಪಿಯಲ್ಲಿ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಮಾಜಿ ಸಚಿವ ಎ ಮಂಜು ಕಾಂಗ್ರೆಸ್‌ಗೆ ಮರಳುವ ಪ್ರಯತ್ನ ಮುಂದುವರಿಸಿದ್ದಾರೆ. ಇದರ ಭಾಗವಾಗಿಯೇ ಅವರ ಅಭಿಮಾನಿಗಳು ಹಾಗೂ ಕೆಲ ಮುಖಂಡರು ಇಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನ ಅವರ ನಿವಾಸದಲ್ಲಿ ಭೇಟಿಯಾಗಿ ಚರ್ಚಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ರನ್ನ ಭೇಟಿಯಾದ ಎ ಮಂಜು ಅಭಿಮಾನಿಗಳು ನಿರಂತರವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುವ ಪ್ರಯತ್ನದಲ್ಲಿರುವ ಮಂಜು, 2023ರ ವಿಧಾನಸಭೆ ಚುನಾವಣೆ ವೇಳೆಗೆ ಮತ್ತೊಮ್ಮೆ ಅರಕಲಗೂಡು ಕ್ಷೇತ್ರದಿಂದ ಅಭ್ಯರ್ಥಿಯಾಗಿ ತಮ್ಮ ರಾಜಕೀಯ ಭವಿಷ್ಯ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಹಾಸನ ಜಿಲ್ಲೆಯಲ್ಲಿ ಬಿಜೆಪಿ ಹೊರತುಪಡಿಸಿದರೆ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ನೆಲೆ ಇದೆ.
ಬಿಜೆಪಿಯಲ್ಲಿದ್ದರೆ ರಾಜಕೀಯ ಭವಿಷ್ಯ ಕಂಡುಕೊಳ್ಳಲು ಸಾಧ್ಯವಿಲ್ಲ, ಅಲ್ಲದೆ ಹಾಸನ ಜಿಲ್ಲೆಯ ಹಿಡಿತವನ್ನು ಬಹುತೇಕ ಶಾಸಕ ಪ್ರೀತಮ್ ಗೌಡ ಸಾಧಿಸಿದ್ದು, ತಮಗೆ ರಾಜಕೀಯವಾಗಿ ಅಸ್ತಿತ್ವ ಉಳಿಸಿಕೊಳ್ಳಬೇಕೆಂದರೆ ಕಾಂಗ್ರೆಸ್ ಸೇರ್ಪಡೆಯೊಂದೇ ಮಾರ್ಗ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಸಿದ್ದರಾಮಯ್ಯ ಅಡ್ಡಗಾಲು? :ಎ ಮಂಜು ಮೂಲತಃ ಬಿಜೆಪಿಯವರು, ನಂತರದ ದಿನಗಳಲ್ಲಿ ಕಾಂಗ್ರೆಸ್‌ಗೆ ಬಂದು ಎರಡು ಬಾರಿ ಶಾಸಕರಾಗಿ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. 2014ರ ಲೋಕಸಭೆ ಚುನಾವಣೆಯಲ್ಲಿ ಹಾಸನದಿಂದ ದೇವೇಗೌಡರ ವಿರುದ್ಧವೇ ಸ್ಪರ್ಧಿಸಿ ಸೋಲುಂಡಿದ್ದರು. 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡ ಹಿನ್ನೆಲೆ ಹಾಸನದಿಂದ ಸ್ಪರ್ಧಿಸುವ ಅವಕಾಶ ಕೈತಪ್ಪಿತ್ತು.
ಈ ಸಂದರ್ಭ ಬಿಜೆಪಿ ಸೇರ್ಪಡೆಯಾದ ಎ ಮಂಜು ಲೋಕಸಭೆಗೆ ಕಮಲ ಪಕ್ಷದಿಂದ ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ಸೋತ ಬಳಿಕ ಅವರಿಗೆ ರಾಜಕೀಯವಾಗಿ ಬಿಜೆಪಿಯಲ್ಲಿ ಯಾವುದೇ ಸ್ಥಾನಮಾನ ಸಿಗಲಿಲ್ಲ. ಇದೀಗ ಕಾಂಗ್ರೆಸ್‌ಗೆ ವಾಪಸ್ ಬರಲು ನಡೆಸಿರುವ ಇವರ ಪ್ರಯತ್ನಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ ಅಡ್ಡಗಾಲಾಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಹಳೇ ಮೈಸೂರು ಭಾಗದಲ್ಲಿ ಅದರಲ್ಲೂ ಹಾಸನ ಜಿಲ್ಲೆಯಲ್ಲಿ ಹೆಚ್ಚಿನ ಸ್ಥಾನ ಗಳಿಸುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿರುವ ಅವರು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅರಕಲಗೂಡು ಹಾಲಿ ಶಾಸಕರಾಗಿರುವ ಜೆಡಿಎಸ್ನ ಎ ಟಿ ರಾಮಸ್ವಾಮಿ ಅವರನ್ನು ಕಾಂಗ್ರೆಸ್‌ಗೆ ಸೆಳೆಯುವ ಚಿಂತನೆ ನಡೆಸಿದ್ದಾರೆ. ಇದು ಸಾಧ್ಯವಾಗದಿದ್ದರೆ ಸ್ಥಳೀಯವಾಗಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿರುವ ಬ್ಲಾಕ್ ಅಧ್ಯಕ್ಷ ಪ್ರಸನ್ನಕುಮಾರ್ ಸಹ ಮಂಜು ವಾಪಸಿಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಈಗಾಗಲೇ ತಮ್ಮ ಆಪ್ತರನ್ನು ಸಿದ್ದರಾಮಯ್ಯ ಬಳಿ ಕಳುಹಿಸಿ ಒಂದು ಸುತ್ತು ಸಮಾಲೋಚನೆ ನಡೆಸಿರುವ ಎ ಮಂಜು, ಇದು ಪ್ರಯೋಜನವಾಗುವುದಿಲ್ಲ ಎಂದು ಅರಿತ ಹಿನ್ನೆಲೆ ತಮ್ಮ ಅಭಿಮಾನಿಗಳನ್ನ ಇಂದು ಡಿಕೆ ಶಿವಕುಮಾರ್ ಬಳಿ ಕಳುಹಿಸಿ ಕೊಟ್ಟಿದ್ದಾರೆ ಎಂಬ ಮಾಹಿತಿ ಇದೆ.
ಏನಾದರೂ ಅವಕಾಶ ಕೊಟ್ಟರೆ ಕಾಂಗ್ರೆಸ್ ಸೇರಬೇಕೆಂಬ ಮಂಜು ಆಸೆಗೆ ಡಿಕೆಶಿ ಉತ್ತೇಜಿಸುವ ಪ್ರಯತ್ನ ಮಾಡುತ್ತಿದ್ದರೇ, ಸಿದ್ದರಾಮಯ್ಯ ಖಂಡಿಸುವ ಕಾರ್ಯ ಮಾಡುತ್ತಿದ್ದಾರೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಹೇಗಾದರೂ ರಾಜಕೀಯ ನೆಲೆ ಭದ್ರಪಡಿಸಿಕೊಳ್ಳಲು ಕಾಂಗ್ರೆಸ್ ಪಕ್ಷ ಸೇರ್ಪಡೆಯೊಂದೇ ತಮಗಿರುವ ಹಾದಿ ಎಂಬುದನ್ನು ಅರಿತಿರುವ ಎ. ಮಂಜು ತಮ್ಮ ಪ್ರಯತ್ನವನ್ನು ಮತ್ತಷ್ಟು ಮುಂದುವರಿಸುವ ನಿರ್ಧಾರ ಕೈಗೊಂಡಿದ್ದಾರೆ ಎಂಬ ಮಾಹಿತಿ ಇದೆ.