ಬೆಂಗಳೂರು: ಇಲ್ಲಿನ ವಿಜಯಾ ಕಾಲೇಜಿನ ಮಹಿಳಾ ಶೌಚಾಲಯಕ್ಕೆ ವ್ಯಕ್ತಿಯೊಬ್ಬ ನುಗ್ಗಿ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ಆರೋಪ ಪ್ರಕರಣವು ಜಯನಗರ ಠಾಣಾ ಪೊಲೀಸ್ ವ್ಯಾಪ್ತಿಯಲ್ಲಿ ಜನವರಿ 10ರಂದು ನಡೆದಿತ್ತು. ಇದೀಗ ಘಟನೆಯ ಆರೋಪಿಯನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಅಜಯ್ ಕುಮಾರ್ (39) ಎಂದು ಗುರುತಿಸಲಾಗಿದೆ.
ಅಂದು ಕಾಲೇಜಿನ ಶೌಚಾಲಯದಲ್ಲಿ ನಡೆದಿದ್ದೇನು? ಜನವರಿ 10ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಜಯನಗರದ ವಿಜಯಾ ಕಾಲೇಜಿನ ಶೌಚಾಲಯದ ಒಳಗೆ ವಿದ್ಯಾರ್ಥಿನಿಯೊಬ್ಬರು ಹೋದಾಗ ಆರೋಪಿ ಅಜಯ್ ಕುಮಾರ್ ಒಳಗಡೆ ಇರುವುದು ಗೊತ್ತಾಗಿತ್ತು. ಯುವತಿಯನ್ನು ನೋಡುತ್ತಿದ್ದಂತೆ ಆರೋಪಿಯು ಆಕೆಯ ಮೈ-ಕೈ ಮುಟ್ಟಿ ಎಳೆದಾಡಿ ಅಸಭ್ಯವಾಗಿ ವರ್ತಿಸಿದ್ದ ಎನ್ನಲಾಗಿತ್ತು. ಭಯಭೀತಳಾದ ವಿದ್ಯಾರ್ಥಿನಿ ಕಿರುಚಾಡಿಕೊಳ್ಳುತ್ತಿದ್ದಂತೆ ಶೌಚಾಲಯದ ಬಾಗಿಲಿಗೆ ಚಿಲಕ ಹಾಕಿ ಆರೋಪಿ ಸ್ಥಳದಿಂದ ಕಾಲ್ಕಿತ್ತಿದ್ದ. ಇದರಿಂದ ಆತಂಕಕ್ಕೆ ಒಳಗಾದ ವಿದ್ಯಾರ್ಥಿಗಳು ಆರೋಪಿಯನ್ನು ಹಿಡಿದು ಬಂಧಿಸುವಂತೆ ಆಗ್ರಹಿಸಿ ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಆರೋಪಿಯನ್ನು ಬಂಧಿಸುವಂತೆ ಪ್ರಾಂಶುಪಾಲರು ನೀಡಿದ ದೂರಿನನ್ವಯ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪೊಲೀಸರು 13 ದಿನಗಳ ಬಳಿಕ ಆರೋಪಿಯನ್ನು ಬಂಧಿಸಿದ್ದಾರೆ.
ಡಿಸಿಪಿ ಪ್ರತಿಕ್ರಿಯೆ:ಘಟನೆ ಬಗ್ಗೆ ಮಾಹಿತಿ ನೀಡಿದ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಪಿ.ಕೃಷ್ಣಕಾಂತ್, ''ಶೌಚಾಲಯಕ್ಕೆ ತೆರಳಿದ್ದಲ್ಲದೆ, ಪ್ರಶ್ನಿಸಿದವರ ಮೇಲೆ ಹಲ್ಲೆ ನಡೆಸಿದ ಸಂಬಂಧ ಎಫ್ಐಆರ್ ದಾಖಲಾಗಿತ್ತು. ಅದರ ಆಧಾರದ ಮೇಲೆ ತನಿಖೆ ಕೈಗೊಂಡು ಅಜಯ್ ಕುಮಾರ್ (39) ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಬಂಧಿತ ವ್ಯಕ್ತಿಯು ಹನುಮಂತನಗರದ ನಿವಾಸಿಯಾಗಿದ್ದಾನೆ. ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದವವನು, ದುಬೈಯಲ್ಲಿ ಕೂಡ ಕೆಲಸ ಮಾಡಿದ್ದ. ಸದ್ಯ ಕೆಲಸ ಬಿಟ್ಟು ವಾಪಸ್ ಬೆಂಗಳೂರಿಗೆ ಮರಳಿದ್ದು, ಧಾರವಾಹಿ ಹಾಗೂ ಸಿನೆಮಾಗಳಲ್ಲಿ ನಟಿಸಲು ಪ್ರಯತ್ನಿಸುತ್ತಿದ್ದ'' ಎಂದು ಡಿಸಿಪಿ ತಿಳಿಸಿದರು.