ಬೆಂಗಳೂರು:ಸಿಲಿಕಾನ್ ಸಿಟಿಯ ಕೆ.ಆರ್. ಮಾರ್ಕೆಟ್ನಲ್ಲಿ ನಿಂಬೆ ಹಣ್ಣಿನ ವ್ಯಾಪಾರ ಮಾಡಿಕೊಂಡಿದ್ದ ಭರತ್ ಎಂಬಾತ ಕೆ.ಆರ್. ಮಾರ್ಕೆಟ್ನ ಟೀ ಅಂಗಡಿ ಬಳಿ ಕುಳಿತಿದ್ದಾಗ ಐವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾರೆ.
ಜೈಲಿನಿಂದ ಬಂದವನೇ ಕೊಲೆಯಾಗಿ ಹೋದ ಮಾರ್ಕೆಟ್ನಲ್ಲಿ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಶರವಣ ಹಾಗೂ ಕೊಲೆಯಾದ ಭರತ್ ನಡುವೆ ಈ ಹಿಂದೆಯೇ ಗಲಾಟೆ ನಡೆದು ಪ್ರಕರಣ ಠಾಣೆಯ ಮೆಟ್ಟಿಲೇರಿತ್ತು. ಹಳೇ ರೌಡಿಶೀಟರ್ ಮಾರ್ಕೆಟ್ ವೇಡಿಯ ಬಾವನಾಗಿದ್ದ ಶರವಣ ಆಗಿನಿಂದಲೇ ಭರತ್ ವಿರುದ್ಧ ಹೊಂಚು ಹಾಕಿದ್ದನಂತೆ. ಹಿಗಾಗಿ ವೈಷಮ್ಯದ ಹಿನ್ನೆಲೆಯಲ್ಲಿ ಶರವಣ, ವೆಂಕಟೇಶ್ ಹಾಗೂ ಇತರೆ ಮೂವರು ಕೊಲೆ ಮಾಡಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ.
ಮತ್ತೊಂದೆಡೆ ಭರತ್ ಮಾರ್ಕೆಟ್ನಲ್ಲಿ ನಿಂಬೆ ಹಣ್ಣು ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಕೆ.ಆರ್ ಮಾರ್ಕೆಟ್ ಮೆಟ್ಟಿಲುಗಳ ಮೇಲೆ ವ್ಯಾಪರ ಮಾಡುವ ನಾಲ್ಕು ಅಡಿ ಜಾಗಕ್ಕೆ ಭರತ್ ಹಾಗೂ ರೌಡಿಶೀಟರ್ ಮಾರ್ಕೆಟ್ ವೇಲು ಗ್ಯಾಂಗ್ ನಡುವೆ ಆಗಾಗ ಗಲಾಟೆ ನಡೆಯುತಿತ್ತು. ಇದೇ ವಿಚಾರಕ್ಕೆ ಕೊಲೆಯಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಕೊಲೆಯಾದ ಭರತ್ ಕಳೆದ ತಿಂಗಳು ಜೆ.ಜೆ ನಗರ ಠಾಣಾ ವ್ಯಾಪ್ತಿಯಲ್ಲಿ ತನ್ನ ಸಹಚರರ ಜೊತೆ ಡಕಾಯಿತಿಗೆ ಯತ್ನಿಸುತ್ತಿದ್ದಾಗ ಪೊಲೀಸರ ಅತಿಥಿಯಾಗಿ ಹದಿನೈದು ದಿನಗಳ ಹಿಂದಷ್ಟೆ ಹೊರಬಂದಿದ್ದ. ಸದ್ಯ ರೌಡಿಶೀಟರ್ ಕೊಲೆ ಸಂಬಂಧ ಕೆ.ಆರ್ ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.