ಬೆಂಗಳೂರು:ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ಸಂತೋಷ್ ಎಂಬಾತ ಕೊಲೆಯಾದ ವ್ಯಕ್ತಿ. ಈತನನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ರಾಜಾಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯ ಲಗ್ಗೆರೆ ಬ್ರಿಡ್ಜ್ ಬಳಿಯಿರುವ ಮೌಂಟ್ ಸೆನೇರಿಯಾ ಸ್ಕೂಲ್ ಬಳಿ ಬೀಸಾಡಲಾಗಿತ್ತು.
ಶಶಿಕುಮಾರ್, ಡಿಸಿಪಿ ಉತ್ತರ ವಿಭಾಗ ಕೊಲೆಗೆ ಕಾರಣ:
ಸಂತೋಷ್ ತನ್ನ ಮೊದಲ ಹೆಂಡತಿ ಗಂಗಾ ಎಂಬುವರನ್ನು ಬಿಟ್ಟು ಕಳೆದ ಒಂದು ವರ್ಷದ ಹಿಂದೆ ಯಮುನಾ ಎಂಬುವರನ್ನು ಮದುವೆಯಾಗಿದ್ದನಂತೆ. ಆದರೆ, ಆಸ್ತಿಗಾಗಿ ಕುಟುಂಬದಲ್ಲಿ ಕಲಹ ಹೆಚ್ಚಾಗಿತ್ತು. ವಿಪರೀತ ಕುಡಿಯುತ್ತಿದ್ದ ಸಂತೋಷ್ ಸುಖಾಸುಮ್ಮನೆ ಕಿರಿಕ್ ಮಾಡ್ಕೊಂಡು ಏರಿಯಾದಲ್ಲಿರುವ ಜನರ ದ್ವೇಷವನ್ನೂ ಕಟ್ಟಿಕೊಂಡಿದ್ದ.
ಇದರ ನಡುವೆ ಸಂತೋಷ್ಗೆ ರಾಜಾಗೋಪಾಲನಗರ ಬಳಿಯಿರುವ ಮನೆಯನ್ನ ತನ್ನ ಮಗಳ ಹೆಸರಿಗೆ ಬರೆದುಕೊಡುವಂತೆ 2ನೇ ಪತ್ನಿ ಯಮುನಾಳ ಪೋಷಕರು ಜಗಳ ತೆಗೆದಿದ್ದರು. ಇದೇ ವಿಚಾರ ಇಟ್ಟುಕೊಂಡು ಹೆಂಡತಿ ಮೇಲೆಯೂ ಕಿರಿಕ್ ತೆಗೆದು ಹಲ್ಲೆ ನಡೆಸಿದ್ದನಂತೆ. ಆದರೆ, ನಿನ್ನೆ ರಾತ್ರಿ ಯಮುನಾ ಸಂತೋಷ್ ಕಾಣೆಯಾಗಿದ್ದಾನೆ ಎಂದು ದೂರು ದಾಖಲಿಸಿದ್ದರು. ಬೆಳಗಾಗುವಷ್ಟರಲ್ಲಿ ಸಂತೋಷ್ ಶವವಾಗಿ ಪತ್ತೆಯಾಗಿದ್ದಾನೆ.
ಸಂತೋಷ್ ಪತ್ನಿ ಯಮುನಾಳೇ ಸುಪಾರಿ ನೀಡಿ ಕೊಲೆ ಮಾಡಿಸಿರುವ ಶಂಕೆ ವ್ಯಕ್ತವಾಗಿದೆ. ಯಮುನಾ ವಿರುದ್ಧ ಬಲವಾದ ಸಾಕ್ಷ್ಯಗಳು ಲಭಿಸಿರುವ ಹಿನ್ನೆಲೆಯಲ್ಲಿ ರಾಜಗೋಪಾಲನಗರ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.