ದೇವನಹಳ್ಳಿ (ಬೆಂಗಳೂರು): ಪಕ್ಕದ ಸೀಟ್ನಲ್ಲಿದ್ದ ಮಹಿಳಾ ಪ್ರಯಾಣಿಕರೊಬ್ಬರು ನಿದ್ರೆಗೆ ಜಾರಿದ ವೇಳೆ ಅವರ ಖಾಸಗಿ ಅಂಗಗಳನ್ನು ಮುಟ್ಟಿ ಪುರುಷ ಪ್ರಯಾಣಿಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿ ಬಂದಿದ್ದು, ಆತನ ವಿರುದ್ಧ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವೆಂಬರ್ 6ರ ರಾತ್ರಿ ಮಹಿಳಾ ಪ್ರಯಾಣಿಕರೊಬ್ಬರು ಲುಫ್ತಾನ್ಸಾ ಏರ್ಲೈನ್ಸ್ನ LH 0754 ವಿಮಾನದಲ್ಲಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. 38ಕೆ ನಂಬರ್ ಸೀಟ್ನಲ್ಲಿ ಕುಳಿತ್ತಿದ್ದ ಅವರು ಪ್ರಯಾಣದ ವೇಳೆ ನಿದ್ರೆಗೆ ಜಾರಿದ್ದರು. ರಾತ್ರಿ 11.45ರ ಸಮಯದಲ್ಲಿ ಎಚ್ಚರಗೊಂಡಾಗ, ಪಕ್ಕದ 38ಜೆ ಸೀಟ್ನಲ್ಲಿ ಕುಳಿತ್ತಿದ್ದ ಸುಮಾರು 50 ವರ್ಷದ ರಂಗನಾಥ್ ಎಂಬಾತ ಮಹಿಳೆಯ ಖಾಸಗಿ ಭಾಗದಲ್ಲಿ ಕೈಯನ್ನಿಟ್ಟಿದ್ದ, ಕೈ ತೆಗೆದು ಮತ್ತೆ ನಿದ್ದೆಗೆ ಜಾರಿದ್ದಾರೆ. 12ಗಂಟೆ ಸಮಯದಲ್ಲಿ ಎಚ್ಚರವಾದಾಗ ಮತ್ತೆ ಆತ ಖಾಸಗಿ ಭಾಗದಲ್ಲಿ ಕೈಯನ್ನಿಟ್ಟಿದ್ದ, ವಿಮಾನದ ಸಿಬ್ಬಂದಿಗೆ ಈ ವಿಷಯವನ್ನ ತಿಳಿಸಿದ ಮಹಿಳೆ ಬೇರೆಯ ಸೀಟ್ನಲ್ಲಿ ಕುಳಿತು ಪ್ರಯಾಣಿಸಿರುವುದಾಗಿ ಆರೋಪಿಸಿದ್ದಾರೆ.
ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿದ ರಂಗನಾಥ್ ಎಂಬ ಪ್ರಯಾಣಿಕನ ವಿರುದ್ಧ ಮಹಿಳಾ ಪ್ರಯಾಣಿಕರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ರಂಗನಾಥ್ ಬೆಂಗಳೂರು ಮೂಲದವರೆಂದು ತಿಳಿದು ಬಂದಿದೆ.