ಬೆಂಗಳೂರು: ಪೊಲೀಸರು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಡೆತ್‌ನೋಟ್ ಬರೆದಿಟ್ಟು ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ತಲಘಟ್ಟಪುರದ ನಾಗರಾಜ್ (47) ಮೃತರು. ಸ್ಥಳಕ್ಕೆ ತಲಘಟ್ಟಪುರ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಸನಾವುಲ್ಲಾ ಎಂಬಾತನ ಒಡೆತನದಲ್ಲಿರುವ ಕಂಪೆನಿಯಲ್ಲಿ ನಾಗರಾಜ್ ಕೆಲಸ ಮಾಡುತ್ತಿದ್ದರು. ಈ ಕಂಪೆನಿಯ ಹೆಸರಿನಲ್ಲಿ ಹಣ ಪಡೆದು ವಂಚಿಸಿರುವುದಾಗಿ ನಟರಾಜ್ ಎಂಬವರು ವೈಯಾಲಿಕಾವಲ್ ಠಾಣೆಗೆ ಇತ್ತೀಚೆಗೆ ದೂರು ನೀಡಿದ್ದರು. ಪ್ರಕರಣ ಸಂಬಂಧ ಕಂಪನಿ ಮಾಲೀಕ ಸನಾವುಲ್ಲಾ ಬದಲಾಗಿ ನಾಗರಾಜ್ ಅವರನ್ನು ಪೊಲೀಸರು ಕರೆದೊಯ್ದು ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಇದರಿಂದ ಮನನೊಂದು ನಾಗರಾಜ್ ಎರಡು ಪುಟಗಳ ಡೆತ್‌ನೋಟ್ ಬರೆದು ಬುಧವಾರ ಮಧ್ಯಾಹ್ನ ಮನೆಯ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪೊಲೀಸರು ಪರಿಶೀಲನೆ ನಡೆಸಿದ ವೇಳೆ ಡೆತ್‌ನೋಟ್ ಪತ್ತೆಯಾಗಿದೆ. ಡೆತ್ನೋಟ್ನಲ್ಲಿ ವೈಯಾಲಿಕಾವಲ್ ಠಾಣೆಯ ಪೊಲೀಸರ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಲ್ಲದೇ, ಠಾಣೆಯ ಪೊಲೀಸ್ ಅಧಿಕಾರಿಗಳ ಹೆಸರನ್ನು ನಾಗರಾಜ್ ಬರೆದಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಮಗಳ ನಿಂದಿಸಿದ ಸ್ನೇಹಿತನ ಹತ್ಯೆ, ಆರೋಪಿ ಬಂಧನ
ಇತ್ತೀಚೆಗೆ ಬೆಂಗಳೂರಲ್ಲಿ ತಾಯಿ, ಮಗಳು ಆತ್ಮಹತ್ಯೆ: ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾವೇರಿ ನಗರದ ಮನೆಯೊಂದರಲ್ಲಿ ಇತ್ತೀಚೆಗೆ ತಾಯಿ, ಮಗಳು ನೇನು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಬಳಿಕ ಇದು ಆತ್ಮಹತ್ಯೆ ಎಂದು ಶಂಕಿಸಲಾಗಿತ್ತು. ದಂತ ವೈದ್ಯೆ ಶೈಮಾ (39) ಮಗಳು ಆರಾಧನ (10) ಮೃತರು.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಕೊಡಗಿನ ವಿರಾಜಪೇಟೆ ಮೂಲದ ಮೃತ ಶೈಮಾ ತಮ್ಮ ಮಗಳ ಜೊತೆ ಆತ್ಮಹತ್ಯೆಗೆ ಶರಣಾಗಿದ್ದರು. ದಂತ ವೈದ್ಯ ತರಬೇತಿ ವೇಳೆ ಕೋಲಾರ ಮೂಲದ ನಾರಾಯಣ್ ಅವರನ್ನು ಪ್ರೀತಿಸಿ ಎರಡೂ ಮನೆಯವರ ಒಪ್ಪಿಗೆ ಮೇರೆಗೆ ಕಳೆದ 10 ವರ್ಷಗಳ ಹಿಂದೆ ಶೈಮಾ ಮದುವೆಯಾಗಿದ್ದರು. ಪತಿ ನಾರಾಯಣ್ ಸಹ ವೈದ್ಯರಾಗಿದ್ದು, ಮನೆಯ ಬಳಿ ಕ್ಲಿನಿಕ್ ಇಟ್ಟುಕೊಂಡಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ತಿಂಗಳು ಮಾಜಿ ಕಾರ್ಪೋರೇಟರ್ ಪುತ್ರ ಆತ್ಮಹತ್ಯೆ: ಬಿಬಿಎಂಪಿ ಮಾಜಿ ಸದಸ್ಯ ದೊಡ್ಡಯ್ಯ ಎಂಬವರ ಪುತ್ರ ಗೌತಮ್ (29) ಕಳೆದ ತಿಂಗಳು ತಮ್ಮ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಚಂದ್ರಾಲೇಔಟ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು. ಗೌತಮ್ ತಂದೆ ದೊಡ್ಡಯ್ಯ ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡಿದ್ದು, ಅತ್ತಿಗುಪ್ಪೆ ಬಿಬಿಎಂಪಿ ವಾರ್ಡ್ನ ಮಾಜಿ ಕಾರ್ಪೋರೇಟರ್ ಆಗಿದ್ದಾರೆ.