ಬೆಂಗಳೂರು: ಆನ್ಲೈನ್ನಲ್ಲಿ ಮೊಬೈಲ್ ಆರ್ಡರ್ ಮಾಡಿ ಡೆಲಿವರಿ ಬಾಯ್ಗೆ ಗೊತ್ತಿಲ್ಲದೆ ಪಾರ್ಸೆಲ್ ನಲ್ಲಿದ್ದ ಮೊಬೈಲ್ ತೆಗೆದುಕೊಂಡು ಬಳಿಕ ಆರ್ಡರ್ ರಿಜೆಕ್ಟ್ ಮಾಡಿ ಪ್ರತಿಷ್ಠಿತ ಕಂಪನಿಗೆ ವಂಚಿಸುತ್ತಿದ್ದ ಆರೋಪಿಯನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ.
ಬನಶಂಕರಿ ಯಾರಬ್ ನಗರದ ಉಮೇರ್ ಬಂಧಿತ ಆರೋಪಿ. ಅಮೆಜಾನ್ ಕಂಪನಿಯ ಪ್ರತಿನಿಧಿ ತರುಣ್ ವರ್ಮಾ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಏನಿದು ಘಟನೆ:
ಕೃತ್ಯ ಎಸಗುವ ಕೆಲ ತಿಂಗಳ ಮುಂಚೆ ಉಮೇರ್ ಅಮೆಜಾನ್ ಕಂಪೆನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಹಣಕಾಸಿನ ಅವ್ಯವಹಾರ ಸಂಬಂಧ ಕಂಪನಿಯು ಈತನನ್ನು ಕೆಲಸದಿಂದ ತೆಗೆದುಹಾಕಿತ್ತು. ಇದಾದ ಬಳಿಕ ಆನ್ ಲೈನ್‌ನಲ್ಲಿ ಮೊಬೈಲ್ ಆರ್ಡರ್ ಮಾಡಿದ್ದ. ಅಂತೆಯೇ ಈತನ ನಿವಾಸಕ್ಕೆ ಡೆಲಿವರಿ ಬಾಯ್ ಪಾರ್ಸೆಲ್ ತಂದುಕೊಟ್ಟಿದ್ದ.
ಪಾರ್ಸೆಲ್ ಸ್ವೀಕರಿಸಿ ಹಣ ತೆಗೆದುಕೊಂಡು ಬರುವುದಾಗಿ ಹೇಳಿ ಮೊಬೈಲ್ ಬಾಕ್ಸ್ ಸಮೇತ ಮನೆಗೆ ಹೋಗಿದ್ದಾನೆ. ಕೆಲ ಹೊತ್ತಿನ ಬಳಿಕ ಮನಯಿಂದ ಹೊರಬಂದು ಹಣ ಸಾಕಾಗುತ್ತಿಲ್ಲ ಎಂದು ಹೇಳಿ ಆರ್ಡರ್ ರಿಜೆಕ್ಟ್ ಮಾಡಿದ್ದಾನೆ. ಇದೇ ರೀತಿ ಮೂರು ಬಾರಿ ಆನ್ ಲೈನ್ ಮೂಲಕ ಮೊಬೈಲ್ ಆರ್ಡರ್ ಮಾಡಿ ಇದೇ ತಂತ್ರ ಅನುಸರಿಸಿ ವಂಚಿಸಿದ್ದ.
ಪಾರ್ಸೆಲ್ ನಲ್ಲಿ ಮೊಬೈಲ್ ಇಲ್ಲದಿರುವ ಬಗ್ಗೆ ತಡವಾಗಿ ಅರಿತ ಕಂಪೆನಿಗೆ ಸತತ ಮೂರು ಬಾರಿ ಆರ್ಡರ್ ಮಾಡಿ ರಿಜೆಕ್ಟ್ ಮಾಡಿದ್ದ ಉಮೇರ್ ಮೇಲೆ ಅನುಮಾನ ಬಂದಿತ್ತು. ಈ ಸಂಬಂಧ ಕಂಪೆನಿಯು ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿತ್ತು. ದೂರಿನ್ವನಯ ಪ್ರಕರಣ ದಾಖಲಿಸಿಕೊಂಡು ಅನುಮಾನಸ್ಪದ ಮೇರೆಗೆ ಉಮೇರ್ ನನ್ನು ಪೊಲೀಸ್ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಹಣಕ್ಕಾಗಿ ವಂಚಿಸುತ್ತಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.