ಬೆಂಗಳೂರು:ರಾಜ್ಯದ ಕೆಲ ಸಾಹಿತಿಗಳಿಗೆ ಕೊಲೆ ಬೆದರಿಕೆ ಪತ್ರ ಬರೆದಿದ್ದ ಪ್ರಕರಣದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ಮೂಲದ ಶಿವಾಜಿ ರಾವ್ ಜಾಧವ್ ಹಿಂದೂ ಸಂಘಟನೆ ಕಾರ್ಯಕರ್ತನಾಗಿದ್ದಾನೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸುವಂತೆ ಸಾಹಿತಿಗಳ ನಿಯೋಗ ಇತ್ತೀಚೆಗೆ ಗೃಹ ಸಚಿವರಿಗೆ ಮನವಿ ಸಲ್ಲಿಸಿತ್ತು. ಅದರಂತೆ ತನಿಖೆ ಕೈಗೊಂಡ ಸಿಸಿಬಿ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಸಾಹಿತಿಗಳಾದ ಕುಂ. ವೀರಭಧ್ರಪ್ಪ, ಬಿ ಟಿ ಲಲಿತಾ ನಾಯಕ್, ಕೆ ಮರುಳಸಿದ್ದಪ್ಪ, ಡಾ .ಜಿ ರಾಮಕೃಷ್ಣ, ಪ್ರೊ. ಎಸ್ ಜಿ ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ್, ವಿಮಲಾ, ಶ್ರೀಪಾದ ಭಟ್, ಸುರೇಂದ್ರ ರಾವ್ ಸೇರಿದಂತೆ ಕೆಲ ಸಾಹಿತಿಗಳಿಗೆ ಅನಾಮಧೇಯವಾಗಿ ಕೊಲೆ ಬೆದರಿಕೆ ಪತ್ರಗಳು ಬರುತ್ತಿದ್ದವು. 'ಡಿಜೆ ಹಳ್ಳಿ - ಕೆಜಿ ಹಳ್ಳಿಯಂಥಹ ಗಲಭೆಗಳ ಬಗ್ಗೆ ಮಾತನಾಡದ ನೀವು ಹಿಂದೂ ಧರ್ಮದ ಕುರಿತು ಅವಹೇಳನ ಮಾಡುತ್ತೀರಿ ಎಂದು ಪತ್ರದಲ್ಲಿ ಉಲ್ಲೇಖಿಸಿ ಬೆದರಿಕೆ ಹಾಕಲಾಗಿತ್ತು. ಬೆಂಗಳೂರು ಸೇರಿದಂತೆ ರಾಜ್ಯದ ಏಳು ಕಡೆಗಳಲ್ಲಿ ಈ ಬಗ್ಗೆ ಎಫ್ಐಆರ್ ದಾಖಲಾಗಿದ್ದವು. ಬಳಿಕ ಪ್ರಕರಣ ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು.
ಎಲ್ಲಾ ಪತ್ರಗಳು ಬರವಣಿಗೆ ಶೈಲಿ ಒಂದೇ ಆಗಿತ್ತು. ದಾವಣಗೆರೆಯಿಂದ ಪೋಸ್ಟ್ ಮಾಡಲಾಗಿದ್ದರ ಹಿನ್ನೆಲೆ ಜಾಡು ಹಿಡಿದು ಹೊರಟ ಸಿಸಿಬಿ ಎಸಿಪಿ ನವೀನ್ ಕುಲಕರ್ಣಿ ನೇತೃತ್ವದ ತಂಡ, ದಾವಣಗೆರೆಯ ಹಿಂದೂ ಸಂಘಟನೆಯೊಂದರ ಕಾರ್ಯಕರ್ತನಾಗಿರುವ ಶಿವಾಜಿ ರಾವ್ ಜಾಧವ್ ಎಂಬ ಆರೋಪಿಯನ್ನ ಬಂಧಿಸಿದೆ. ಆರೋಪಿಯನ್ನು ಸದ್ಯ ಹತ್ತು ದಿನಗಳ ಕಾಲ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಪತ್ರದ ಹಿಂದೆ ಶಿವಾಜಿ ರಾವ್ ಒಬ್ಬನೇ ಇದ್ದಾನಾ ಅಥವಾ ಆತನ ಹಿಂದೆ ಬೇರೆ ಯಾರಾದರೂ ಇದ್ದಾರಾ ಎಂಬುದು ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.