ಕರ್ನಾಟಕ

karnataka

ETV Bharat / state

12 ರೂಪಾಯಿ ಸಿಗರೇಟ್​​​​ ದುಡ್ಡು ಕೊಟ್ಟು ಜೋಡಿ ಕೊಲೆಗೆ ಸ್ಕೆಚ್​... ಹಣದಾಸೆಗೆ ಬಿದ್ದು ಡಬಲ್​​​ ಮರ್ಡರ್​​​! - 12 ರೂಪಾಯಿ ಸಿಗರೇಟ್​​​​ ದುಡ್ಡು ಕೊಟ್ಟು ಜೋಡಿ ಕೊಲೆಗೆ ಸ್ಕೆಚ್

ಹಣಕ್ಕಾಗಿ ಡಬಗ್ ಮರ್ಡರ್ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಗರೇಟ್ ಹಣ ನೀಡಿ ಕೊಲೆಗೆ ಸ್ಕೆಚ್ ಹಾಕಿದ್ದ ಆರೋಪಿ, ಇಬ್ಬರ ಪ್ರಾಣ ತೆಗೆದು ಆಭರಣದೊಂದಿಗೆ ಪರಾರಿಯಾಗಿದ್ದ.

a-man-arrested-in-puttenahalli-double-murder-case
12 ರೂಪಾಯಿ ಸಿಗರೇಟ್​​​​ ದುಡ್ಡು ಕೊಟ್ಟು ಜೋಡಿ ಕೊಲೆಗೆ ಸ್ಕೆಚ್

By

Published : Apr 14, 2021, 6:43 PM IST

Updated : Apr 14, 2021, 7:19 PM IST

ಬೆಂಗಳೂರು: ಇದೇ ಏಪ್ರಿಲ್ 7ರ ರಾತ್ರಿ ನಡೆದಿದ್ದ ಡಬಲ್ ಮರ್ಡರ್ ಪ್ರಕರಣಕ್ಕೆ ಬೆಂಗಳೂರು ಬೆಚ್ಚಿಬಿದ್ದಿತ್ತು. ಜೆಪಿ ನಗರದ ಸಂತೃಪ್ತಿ ನಗರದಲ್ಲಿ ಮಮತಾ ಬಸು(75) ಹಾಗೂ ದೇವಾಮೃತ ಮೆಹ್ರಾ(45) ಅವರನ್ನು ಹತ್ಯೆಗೈದಿದ್ದ ಆರೋಪಿ ಮಂಜುನಾಥ್ ಬಳಿಕ ತಲೆಮರೆಸಿಕೊಂಡಿದ್ದ. ಬೆಂಗಳೂರಿನಲ್ಲಿ ಮಮತಾ ಬಸು ಹಾಗೂ ಅವರ ಮಗ ದೀಪ್ ದೇವ್ ಬಸು ಬೇರೆ ಮನೆಯಲ್ಲಿ ವಾಸವಾಗಿದ್ದರು. ಆದರೆ ಕೇವಲ 12 ರೂಪಾಯಿ ಮೂಲಕ ಬಲೆ ಬೀಸಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

ಇದೀಗ ಆರೋಪಿಯ ಕಾಲಿಗೆ ಗುಂಡು ಹೊಡೆದು ಬಂಧಿಸಲಾಗಿದ್ದು, ಸದ್ಯ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಪುಟ್ಟೇನಹಳ್ಳಿ ಜೋಡಿ ಕೊಲೆ ಕುರಿತು ಪೊಲೀಸರ ಮಾಹಿತಿ

ಸಿಗರೇಟ್ ದುಡ್ಡು ನೀಡಿ ಸ್ಕೆಚ್ ಹಾಕಿದ ಆರೋಪಿ

ಕೊಲೆ ನಡೆದ ಹಿಂದಿನ ದಿನ ರಾತ್ರಿ ಮೆಹ್ರಾ ಸಿಗರೇಟ್​ ಸೇದಲೆಂದು ಮನೆಯ ಸಮೀಪದ ಅಂಗಡಿಗೆ ಬಂದಿದ್ದ. ಆದರೆ ಅಂಗಡಿಯವರಿಗೆ ಫೋನ್ ಪೇ ಮಾಡುವಾಗ ತಾಂತ್ರಿಕ ಸಮಸ್ಯೆ ಉಂಟಾಗಿತ್ತು. ಆದ್ರೆ ಅಂಗಡಿಗೆ ನೀಡಲು ಬೇರೆ ಹಣ ಅವನ ಬಳಿ ಇರಲಿಲ್ಲ. ಇದೇ ವೇಳೆ ಪಕ್ಕದಲ್ಲಿ ನಿಂತಿದ್ದ ಆರೋಪಿ ಮಂಜುನಾಥ್ 12 ರೂಪಾಯಿ ನೀಡಿ ಪರಿಚಯ ಮಾಡಿಕೊಂಡಿದ್ದಾನೆ. ಮದ್ಯಪಾನ ಮಾಡಿದ್ದ ಮೆಹ್ರಾನನ್ನು ಮನೆವರೆಗೂ ಬಿಡಲು ಬಂದಿದ್ದಾನೆ. ಈ ವೇಳೆ ಮನೆಯಲ್ಲಿ ಮಹಿಳೆ ಮತ್ತು ಮೆಹ್ರಾ ಇಬ್ಬರೇ ವಾಸವಾಗಿದ್ದಾರೆ ಎಂಬುದನ್ನು ಅರಿತು ದರೋಡೆಗೆ ಸ್ಕೆಚ್ ಹಾಕಿದ್ದಾನೆ.

ಕೊಲೆ ಬಳಿಕ ಮೃತನ ಬಟ್ಟೆ ಧರಿಸಿ ಎಸ್ಕೇಪ್

ಮೆಹ್ರಾನನ್ನು ಮನೆಗೆ ಬಿಟ್ಟು ತೆರಳಿದ ಆರೋಪಿ ಮಂಜುನಾಥ್, ಒಂದು ಚಾಕು ಹಿಡಿದು ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಕದ್ದು, ಕೊಲೆ ಮಾಡುವ ಉದ್ದೇಶದಿಂದ ಕಾಲಿಂಗ್ ಬೆಲ್ ಹೊಡೆದಿದ್ದಾನೆ. ತಕ್ಷಣ ಬಾಗಿಲು ತೆಗೆದು ಮೆಹ್ರಾ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಬಳಿಕ ಒಳಗಿದ್ದ ಮಮತಾ ಬಸು ಅವರಿಗೂ ಚಾಕುವಿನಿಂದ ಇರಿದು ಉಸಿರು ನಿಲ್ಲಿಸಿದ್ದಾನೆ. ಬಳಿಕ ಒಡವೆ, ಹಣ ದೋಚಿದ್ದಾನೆ. ಇಷ್ಟೇ ಅಲ್ಲ ಸಿಸಿಟಿವಿ ದೃಶ್ಯ ನಾಶ ಮಾಡಲು ಡಿವಿಆರ್ ಕಳ್ಳತನ ಮಾಡಿದ್ದಾನೆ. ಅಲ್ಲದೆ ಆರೋಪಿಯ ಬಟ್ಟೆ ರಕ್ತವಾಗಿದ್ದರಿಂದ ಮೃತ ಮೆಹ್ರಾ ಬಟ್ಟೆಯನ್ನು ಹಾಕಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಎರಡೂವರೆ ತಿಂಗಳ ಹಿಂದಷ್ಟೇ ಬಿಡುಗಡೆಯಾಗಿದ್ದ ಆರೋಪಿ

ಹಣಕ್ಕಾಗಿ ಅವಳಿ ಕೊಲೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಕಂಡುಕೊಂಡ ಪೊಲೀಸರಿಗೆ ಆರೋಪಿ ಚಹರೆ ಹಾಗೂ ಸುಳಿವು ಲಭ್ಯವಾಗಿರಲಿಲ್ಲ. ಈ ದಿಸೆಯಲ್ಲಿ ಹಣಕ್ಕಾಗಿ ದರೋಡೆ, ಕಳ್ಳತನ ಮಾಡಿ ಜೈಲಿಗೆ ಹೋಗಿ ಇತ್ತೀಚೆಗೆ ಬಿಡುಗಡೆಯಾಗಿದ್ದ ಆರೋಪಿಗಳ ಬಗ್ಗೆ ಮಾಹಿತಿ ಕಲೆ‌ಹಾಕಿದ ಪೊಲೀಸರಿಗೆ ಮಂಜುನಾಥ್ ಬಿಡುಗಡೆಯಾಗಿರುವ ವಿಚಾರ ಗೊತ್ತಾಗಿದೆ.‌ ಈತನ ಹಿನ್ನೆಲೆ ಕೆದಕಿದಾಗ ಕೊಲೆ, ರಾಬರಿ ಸೇರಿದಂತೆ 9ಕ್ಕೂ‌ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ. ಪ್ರಕರಣದಲ್ಲಿ‌ ಮೂರು ವರ್ಷದಿಂದ ಜೈಲು ಶಿಕ್ಷೆ ಅನುಭವಿಸಿ ಜಾಮೀನಿನ ಮೇರೆಗೆ ಹೊರಬಂದಿದ್ದ ಎಂಬ ಸಂಗತಿ ಸಹ ತಿಳಿದು ಬಂದಿತ್ತು.

ಆದರೆ ಆರೋಪಿ ಮೊಬೈಲ್ ಬಳಸುತ್ತಿರಲಿಲ್ಲ. ಹೀಗಿರುವಾಗ ಈತನ ಸ್ನೇಹಿತೆಗೆ ಅಪರಚಿತರ ಮೊಬೈಲ್​ನಿಂದ ಈತ ಕರೆ ಮಾಡಿರುವುದು ಪತ್ತೆಯಾಗಿತ್ತು. ಈ ಬಗ್ಗೆ ಖುದ್ದು ಮಹಿಳೆಯೇ ಮಾಹಿತಿ ನೀಡಿದ್ದಳು. ಈ ಮಾಹಿತಿ ಆಧರಿಸಿ ಮೊಬೈಲ್ ನಂಬರ್ ಟ್ರ್ಯಾಕ್ ಮಾಡಿದಾಗ ಶೇಖರ್ ಎಂಬಾತನ ನಂಬರ್​ ಆಗಿದ್ದು, ಆತನ ಬಳಿಯೇ ಈ ಬೈಕ್ ಪತ್ತೆಯಾಗಿತ್ತು. ಇದರಿಂದ ಈ ಕೃತ್ಯ ಎಸಗಿರುವುದು ಮಂಜುನಾಥ್ ಎಂಬುದು ದೃಢವಾಗಿತ್ತು.

ಇದರ ಜಾಡು ಹಿಡಿದು ಮಂಜುನಾಥ್​​​ನ ಬಂಧಿಸಲು ಹೋದಾಗ ಪೊಲೀಸರ ಮೇಲೆ ಗುಂಡು ಹಾರಿಸಲು ಯತ್ನಿಸಿದ್ದಾನೆ. ಈ ವೇಳೆ ಪಿಸ್ತೂಲಿನಿಂದ ಪೊಲೀಸ್ ಇನ್ಸ್​ಪೆಕ್ಟರ್ ಕಿಶೋರ್ ಗುಂಡು ಹಾರಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆ ವೇಳೆ ಮೃತನ ಕೈಯಲ್ಲಿದ್ದ ಮೊಬೈಲ್​​ಗಾಗಿ ಹತ್ಯೆ ಮಾಡಿರುವುದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ.

Last Updated : Apr 14, 2021, 7:19 PM IST

ABOUT THE AUTHOR

...view details