ಬೆಂಗಳೂರು: 1998ನೇ ಸಾಲಿನಲ್ಲಿ ಕರ್ನಾಟಕ ಲೋಕಸೇವಾ ಆಯೋಗದಿಂದ ನೇಮಕಗೊಂಡ ಕೆಎಎಸ್ ಅಧಿಕಾರಿಗಳ ಪರಿಷ್ಕೃತ ಆಯ್ಕೆ ಪಟ್ಟಿಯಿಂದ ಹಲವು ಅಧಿಕಾರಿಗಳಿಗೆ ಸೇವಾಭದ್ರತೆ ಸಿಗದೇ ಇರುವ ಕಾರಣ ಅವರಿಗೆ ಸೇವಾಭದ್ರತೆ ಒದಗಿಸಲು ಸರ್ಕಾರ ''ಸುಗ್ರೀವಾಜ್ಞೆ 2019” ಅನ್ನು ಜಾರಿಗೆ ತರಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ಸಚಿವ ಸಂಪುಟ ಸಭೆ ನಂತರ ಇಂದು ಸುದ್ದಿಗೋಷ್ಟಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಬೈರೇಗೌಡ ಅವರು ಮಾಹಿತಿ ನೀಡಿ, ಉಚ್ಚನ್ಯಾಯಾಲಯದ ಆದೇಶದನ್ವಯ ನಡೆದುಕೊಂಡರೆ 28 ಅಧಿಕಾರಿಗಳನ್ನು ಹುದ್ದೆಯಿಂದ ತೆಗೆದುಹಾಕಬೇಕಾಗುತ್ತದೆ. ಅಲ್ಲದೆ, 115 ಅಧಿಕಾರಿಗಳು ಸೇವಾ ಬದಲಾವಣೆಗೆ ಒಳಗಾಗಬೇಕಾಗುತ್ತದೆ. ಇವರಿಗೆ ಸೇವಾಭದ್ರತೆ ಒದಗಿಸಲು ಈ ವಿಧೇಯಕವನ್ನು ತರಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಸಚಿವ ಸಂಪುಟ ಸಭೆಯ ಇತರ ಪ್ರಮುಖ ನಿರ್ಣಯಗಳು: ಅದೇ ರೀತಿ ಹಲವು ವಿಷಯಗಳಿಗೆ ಸಂಪುಟ ಇಂದು ಅನುಮೋದನೆ ನೀಡಿರುವ ಬಗ್ಗೆ ಸಚಿವರು ಮಾಹಿತಿ ನೀಡಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಬರದ ಛಾಯೆ ಇರುವ ಪ್ರದೇಶಗಳಲ್ಲಿ 2019 ಮತ್ತು 2020 ರಲ್ಲಿ ಮೋಡಬಿತ್ತನೆ ಕಾರ್ಯಾಚರಣೆ ಕೈಗೊಳ್ಳಲು 2 ವಿಮಾನ ಹಾಗೂ 3 ರೇಡಾರ್ಗಳನ್ನು ಬಳಸಲು 93 ಕೋಟಿ. ರೂ.ಗಳನ್ನು ವೆಚ್ಚ ಮಾಡಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ರಾಜ್ಯ ಸಚಿವ ಸಂಪುಟ ಸಭೆಯಿಂದ ಮಹತ್ವದ ತೀರ್ಮಾನ
ಸಮಾಜ ಕಲ್ಯಾಣ ಇಲಾಖೆಯಿಂದ ವಸತಿ ಶಿಕ್ಷಣ ಸಂಸ್ಥೆಗಳ 15 ಪರಿಶಿಷ್ಟ ಜಾತಿ ಮತ್ತು ಪಂಗಡದ ವಿವಿಧ ವಸತಿ ಶಾಲೆಗಳ ಕಟ್ಟಡದ ನಿರ್ಮಾಣಕ್ಕೆ 377.15 ಕೋಟಿ ರೂ.ಗಳಿಗೆ ಕಾಮಗಾರಿ ಕೈಗೊಳ್ಳಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಮದ್ದೂರು ಪಟ್ಟಣಕ್ಕೆ 2ನೇ ಹಂತದ ಒಳಚರಂಡಿ ಕಲ್ಪಿಸಲು 50.15 ಕೋಟಿ ರೂ.ಗಳ ಯೋಜನೆಗೆ ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಮೋಡಬಿತ್ತನೆ ಮುಂದಾದ ಸರ್ಕಾರ: 91 ಕೋಟಿ ರೂ. ವೆಚ್ಚದಲ್ಲಿ ಮೋಡಬಿತ್ತನೆಗೆ ಸಂಪುಟ ಒಪ್ಪಿಗೆ ನೀಡಿದೆ. ಹೇಮಾವತಿ ನದಿ ಮೂಲದಿಂದ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿಗೆ ಸಮಗ್ರ ಕುಡಿಯುವ ನೀರು ಒದಗಿಸುವ ಯೋಜನೆಗಾಗಿ 62.45 ಕೋಟಿ ರೂ.ಗಳ ಕಾಮಗಾರಿಗೆ ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಸಚಿವ ಕೃಷ್ಣಬೈರೇಗೌಡ ಮಾಹಿತಿ ನೀಡಿದ್ರು.