ಆನೇಕಲ್: ಮನೆ ಕೆಲಸ ಹಾಗೂ ವಯಸ್ಸಾದ ತಂದೆ, ತಾಯಿಯನ್ನು ನೋಡಿಕೊಳ್ಳಲು ಆ್ಯಪ್ ಮೂಲಕ 21 ವರ್ಷದ ಯುವತಿಯನ್ನು ಮನೆಗೆ ಕರೆಸಿಕೊಂಡು ಅತ್ಯಾಚಾರ ಎಸಗಿರುವ ಆರೋಪ ಪ್ರಕರಣ ಬೆಂಗಳೂರಿನ ಪರಪ್ಪನ ಅಗ್ರಹಾರ ಸಮೀಪದ ಕೂಡ್ಲು ಬಡಾವಣೆಯಲ್ಲಿ ಬೆಳಕಿಗೆ ಬಂದಿದೆ.
ಅತ್ಯಾಚಾರ ಆರೋಪ ಸಂಬಂಧ 47 ವರ್ಷದ ಕೇಶವಮೂರ್ತಿ ಎಂಬುವರನ್ನು ಬಂಧಿಸಲಾಗಿದೆ. ಆರೋಪಿ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದು, ವಯಸ್ಸಾದ ತಂದೆ, ತಾಯಿ ನೋಡಿಕೊಳ್ಳಲು ಹಾಗೂ ಮನೆ ಕೆಲಸಕ್ಕೆ ಮಹಿಳಾ ಕೆಲಸದವರು ಬೇಕೆಂದು ವಿಲ್ಸನ್‍ಗಾರ್ಡನ್‍ನಲ್ಲಿರುವ ಆ್ಯಪ್ನ ಕಚೇರಿಯನ್ನು ಸಂಪರ್ಕಿಸಿದ್ದರಂತೆ.
ತಮ್ಮ ವೃದ್ಧ ತಾಯಿಯನ್ನು ನೋಡಿಕೊಳ್ಳಲು ತಿಂಗಳಿಗೆ 15 ಸಾವಿರ ರೂಪಾಯಿ ಕೊಡುವುದಾಗಿ ಹೇಳಿ, ಒಟ್ಟು 18 ಸಾವಿರ ಕೊಟ್ಟು ರೂಪಾಯಿ ಯುವತಿಯನ್ನು ಮನೆಗೆ ಕರೆದುಕೊಂಡು ಬಂದಿದ್ದರಂತೆ. ಮನೆಗೆ ಬಂದ ಯುವತಿಯ ಮೇಲೆ ಸತತವಾಗಿ ಅತ್ಯಾಚಾರ ಎಸಗಿದ್ದಾರಂತೆ. ಮನೆಯ ಪಾಲನೆಗಾಗಿ ಯುವತಿ ಝಾರ್ಖಂಡ್ ನಿಂದ ಬೆಂಗಳೂರಿಗೆ ಬಂದಿದ್ದಳು ಎಂದು ತಿಳಿದುಬಂದಿದೆ.