ಬೆಂಗಳೂರು: ಬಸವಕಲ್ಯಾಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ನಾರಾಯಣರಾವ್ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡಿದೆ.
ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಸೆಪ್ಟೆಂಬರ್ 1ರಂದು ದಾಖಲಾಗಿರುವ ಶಾಸಕರ ಆರೋಗ್ಯದಲ್ಲಿ ಸಾಕಷ್ಟು ಏರುಪೇರು ನಂತರದ ದಿನಗಳಲ್ಲಿ ಕಂಡು ಬಂದಿದ್ದು, ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ದಾಖಲಾದ ಎರಡನೇ ದಿನವೇ ಇವರ ಆರೋಗ್ಯದಲ್ಲಿ ಸಾಕಷ್ಟು ಏರಿಳಿತ ಕಂಡು ಬಂತು. ಹಾಗಾಗಿ ಆಸ್ಪತ್ರೆ ವೈದ್ಯರು ಇವರನ್ನು ವೆಂಟಿಲೇಟರ್ನಲ್ಲಿ ಇರಿಸಿ ಚಿಕಿತ್ಸೆ ನೀಡುತ್ತಿದ್ದಾರೆ.
ಅಧಿಕ ರಕ್ತದೊತ್ತಡ ಹಾಗೂ ಮಧುಮೇಹದಿಂದ ಬಳಲುತ್ತಿದ್ದ ಶಾಸಕರಿಗೆ ಆಸ್ಪತ್ರೆಗೆ ದಾಖಲಾದ ನಂತರ ಶ್ವಾಸಕೋಶದ ಸೋಂಕು ಕೂಡ ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಸೆಪ್ಟೆಂಬರ್ 3ರಂದು ಇವರಿಗೆ ಪ್ಲಾಸ್ಮಾ ಚಿಕಿತ್ಸೆ ಕೂಡ ನೀಡಲಾಗಿದೆ. ಈ ಚಿಕಿತ್ಸೆಗೆ ಸ್ಪಂದಿಸಿರುವ ಶಾಸಕರ ಆರೋಗ್ಯ ನಿಧಾನವಾಗಿ ಚೇತರಿಕೆ ಕಾಣುತ್ತಿದೆ. ಸದ್ಯ ಅವರ ಶ್ವಾಸಕೋಶದ ಸೋಂಕು ಸಾಕಷ್ಟು ಗುಣಮುಖವಾಗಿದೆ.
ಕಣ್ಣು ತೆರೆದ ಶಾಸಕರು: ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಸಕರನ್ನು ಮೂರು ದಿನಗಳ ಹಿಂದೆ ಕುಟುಂಬ ಸದಸ್ಯರು ಆಗಮಿಸಿ ವೀಕ್ಷಿಸಿ ತೆರಳಿದ್ದಾರೆ. ಇದೀಗ ನಿನ್ನೆ ಸಂಜೆ ಶಾಸಕರು ಕಣ್ಣು ತೆರೆದಿದ್ದು, ಆರೋಗ್ಯದಲ್ಲಿಯೂ ಸಾಕಷ್ಟು ಚೇತರಿಕೆ ಪಡೆದಿದ್ದಾರೆ. ಸದ್ಯ ಯಾರೊಂದಿಗೂ ಮಾತನಾಡುವ ಸಾಮರ್ಥ್ಯ ಇನ್ನೂ ಪಡೆದುಕೊಂಡಿಲ್ಲ. ಆದರೆ ಇಂದಿನ ಸ್ಥಿತಿಗೆ ಹೋಲಿಸಿದರೆ ಅವರ ಆರೋಗ್ಯದಲ್ಲಿ ಸಾಕಷ್ಟು ಚೇತರಿಕೆ ಕಂಡಿದೆ ಎಂದು ವೈದ್ಯರಿಂದ ತಿಳಿದು ಬಂದಿದೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ.
ಜೀವಕ್ಕೆ ಅಪಾಯವಿಲ್ಲ: ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದ ಶಾಸಕರ ಸ್ಥಿತಿ ಒಂದು ಹಂತದಲ್ಲಿ ಚಿಂತಾಜನಕವಾಗಿತ್ತು. ಆದರೆ ಪ್ಲಾಸ್ಮಾ ಚಿಕಿತ್ಸೆ ಅವರ ಕೈ ಹಿಡಿದಿದ್ದು, ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಆರೋಗ್ಯದಲ್ಲಿ ಒಂದಿಷ್ಟು ಸುಧಾರಣೆ ಕಂಡು ಬಂದಿದ್ದರೂ ಸದ್ಯ ಅವರನ್ನು ವಿಶೇಷ ನಿಗಾದಲ್ಲಿ ಇರಿಸಲಾಗಿದೆ. ಇನ್ನೂ 10-15 ದಿನ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಅನಿವಾರ್ಯತೆ ಇದೆ. ಅವರ ಆರೋಗ್ಯ ಇನ್ನೂ ಒಂದು ವಾರ ಕಾಲ ಇದೇ ರೀತಿ ಚೇತರಿಕೆ ಕಾಣಬೇಕಿದೆ. ಸದ್ಯದ ಸ್ಥಿತಿಯಲ್ಲಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯ ಮೂಲಗಳು ತಿಳಿಸಿವೆ.