ಬೆಂಗಳೂರು:ಆಗ ತಾನೇ ಜನಿಸಿದ ನವಜಾತ ಶಿಶುವನ್ನು ಬ್ಯಾಗ್ನಲ್ಲಿ ಇಟ್ಟು, ಮಹಿಳೆವೋರ್ವಳು ಅನಾಥವಾಗಿ ಬಿಟ್ಟುಹೋಗಿರುವ ಮನಕಲಕುವ ಘಟನೆ, ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಟಿ.ಆರ್. ಮಿಲ್ ಬಳಿ ನಡೆದಿದೆ.
ಶೌಚಾಲಯಕ್ಕೆ ಹೋಗಿ ಬರುವೆ ಬ್ಯಾಗ್ ನೋಡಿ ಎಂದವಳು ನಾಪತ್ತೆ: ಅನಾಥವಾಯ್ತು ನವಜಾತ ಶಿಶು - ಬೆಂಗಳೂರು
ಸ್ವಲ್ಪ ಹೊತ್ತು ಬ್ಯಾಗ್ ಹಿಡಿದುಕೊಳ್ಳಿ ನೀರು ಕುಡಿದು ಶೌಚಾಲಯಕ್ಕೆ ಹೋಗಿ ಬರುವೆ ಎಂದ ಮಹಿಳೆ, ಮಗುವೊಂದನ್ನು ಬಿಟ್ಟು ಪರಾರಿಯಾಗಿದ್ದಾಳೆ. ಈ ಘಟನೆ ಬೆಂಗಳೂರಲ್ಲಿ ನಡೆದಿದೆ.
ಕಾಲೇಜು ವಿದ್ಯಾರ್ಥಿಗಳಾದ ಲಕ್ಷ್ಮೀ ಪವನ್ ಹಾಗೂ ಚರಣ್ ಎಂಬುವರು ಅಂಗಡಿಯೊಂದರ ಬಳಿ ಟೀ ಕುಡಿಯುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬ್ಯಾಗ್ ಹಿಡಿದು ಬಂದ ಮಹಿಳೆ, ಸ್ವಲ್ಪ ಹೊತ್ತು ಬ್ಯಾಗ್ ಹಿಡಿದುಕೊಳ್ಳಿ, ನೀರು ಕುಡಿದು ಶೌಚಾಲಯಕ್ಕೆ ಹೋಗಿ ಬರುವೆ ಎಂದು ಹೇಳಿ ಹೋಗಿದ್ದಾಳೆ. ಆಕೆ ಬರುವಿಕೆಗಾಗಿ ಕಾಯುತ್ತಿದ್ದಾಗ ಬ್ಯಾಗ್ ಅಲುಗಾಡಿದ್ದನ್ನು ಕಂಡ ವಿದ್ಯಾರ್ಥಿಗಳು, ಆತಂಕದಿಂದ ಬ್ಯಾಗ್ ನೋಡಿದಾಗ ಅಚ್ಚರಿ ಕಾದಿತ್ತು. ಬಟ್ಟೆವೊಂದರಲ್ಲಿ ಆಗತಾನೇ ಜನಿಸಿದ ಗಂಡು ಶಿಶುವನ್ನು ಕಂಡು ಅವರು ಚಕಿತಗೊಂಡಿದ್ದಾರೆ. ಬಹಳ ಹೊತ್ತು ಕಾದರೂ ಮಹಿಳೆ ವಾಪಸ್ ಬರದೇ ನಾಪತ್ತೆಯಾಗಿದ್ದಾಳೆ.
ಶಿಶು ಪತ್ತೆ ಸಂಬಂಧ ನೇರವಾಗಿ ವಿದ್ಯಾರ್ಥಿಗಳು ಚಾಮರಾಜಪೇಟೆ ಪೊಲೀಸರ ಗಮನಕ್ಕೆ ತಂದಿದ್ದಾರೆ. ಆಗ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದರು. ಶಿಶುವಿನಿ ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಮಾಹಿತಿ ನೀಡುವಂತೆ ಪೊಲೀಸರು ಕೋರಿದ್ದಾರೆ. ಅಲ್ಲದೆ, ವಾಣಿವಿಲಾಸ್ ಆಸ್ಪತ್ರೆಯ ವೈದ್ಯರು ಶಿಶು ಆರೋಗ್ಯದಿಂದಿದೆ ಎಂದು ತಿಳಿಸಿದ್ದಾರೆ. ಸದ್ಯ ಪೊಲೀಸರು ನವಜಾತ ಶಿಶುವನ್ನು ಮಕ್ಕಳ ಕಲ್ಯಾಣ ಸಮಿತಿ ಸುಪರ್ದಿಗೆ ಒಪ್ಪಿಸಿದ್ದಾರೆ.