ಬೆಂಗಳೂರು:ತುತ್ತಿನ ಚೀಲ ತುಂಬಿಸಿಕೊಳ್ಳಲು ದೂರದೂರಿಂದ ಬಂದಿದ್ದ ಕೂಲಿ ಕಾರ್ಮಿಕನೋರ್ವ ಮನೆ ಮಾಲೀಕನ ಬೇಜವಾಬ್ದಾರಿಯಿಂದ ಆಸ್ಪತ್ರೆ ಸೇರಿದ ಘಟನೆ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಮಂಜುನಾಥ ನಗರದಲ್ಲಿ ನಡೆದಿದೆ.
ಹೌದು, ಮನೆ ಮಾಲೀಕ, ಕೆಪಿಟಿಸಿಎಲ್ ಹಾಗೂ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತಮಿಳುನಾಡಿನ ಸತೀಶ್ ಎಂಬ ಯುವಕ ಆಸ್ಪತ್ರೆ ಪಾಲಾಗಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದಾನೆ.
ಸತೀಶ್ ಸೋಮವಾರ ಸಂಜೆ ನಿರ್ಮಾಣ ಹಂತದ ಬಿಲ್ಡಿಂಗ್ ಮೇಲೆ ಕೆಲಸ ಮಾಡುತ್ತಿದ್ದ. ಈ ವೇಳೆ ಮನೆ ಮೇಲೆ ಹಾದು ಹೋಗಿರುವ ಹೈಟೆನ್ಷನ್ ತಂತಿ ತಾಗಿದ್ದು ಸತೀಶ್ ಸ್ಥಳದಲ್ಲೇ ಬಿದ್ದಿದ್ದ. ಹೈಟೆನ್ಷನ್ ತಂತಿ ಸ್ಪರ್ಶದಿಂದ ಸತೀಶನ ದೇಹದ ಶೇ.70 ರಷ್ಟು ಭಾಗ ಸುಟ್ಟಿದೆ. ಸದ್ಯ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಚಿಕಿತ್ಸೆ ನೀಡಿರುವ ಆಸ್ಪತ್ರೆ ವೈದ್ಯರು ಇನ್ನೂ ಎರಡು ದಿನಗಳ ಕಾಲ ಏನು ಹೇಳಲಾಗದು ಎಂದಿದ್ದಾರೆ.
ಹೈಟೆನ್ಷನ್ ತಂತಿ ಸ್ಪರ್ಶದಿಂದ ಕೂಲಿ ಕಾರ್ಮಿಕ ಸತೀಶ ಎಂಬುವನ ದೇಹದ ಶೇ.70 ರಷ್ಟು ಭಾಗ ಸುಟ್ಟು ಹೋಗಿದ್ದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ ಮೇಯರ್ ಗಂಗಾಂಬಿಕೆ ಈ ವಿಚಾರ ತಿಳಿಯುತ್ತದ್ದಂತೆ ಮೇಯರ್ ಗಂಗಾಂಬಿಕೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆದರೆ, ಈ ವೇಳೆ ಹಲವು ಅಧಿಕಾರಿಗಳ ಗೈರುಹಾಜರಿ ಕಂಡು ಗರಂ ಆದರು. ಈ ಬಗ್ಗೆ ಸ್ಥಳದಲ್ಲಿದ್ದ ಕೆಲ ಅಧಿಕಾರಿಗಳಿಂದ ಮಾಹಿತಿ ಪಡೆದ ಮೇಯರ್, ಬಿಬಿಎಂಪಿ ನೋಟಿಸ್ಗೆ ಕ್ಯಾರೆ ಅನ್ನದ ಮನೆ ಮಾಲೀಕನ ವಿರುದ್ಧ ದೂರು ದಾಖಲಿಸುವಂತೆ ಆದೇಶಿಸಿದರು. ಅಲ್ಲದೇ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧವೂ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು.