ಕರ್ನಾಟಕ

karnataka

ETV Bharat / state

ಅಪಾರ್ಟ್​​ಮೆಂಟ್​ ನಿರ್ಮಾಣಕ್ಕೆ ಮಣ್ಣು ಅಗೆಯವಾಗ ಗೋಡೆ ಕುಸಿದು ಕಾರ್ಮಿಕ ಸಾವು - ಗೋಡೆ ಕುಸಿದು ಕಾರ್ಮಿಕ ಮೃತ

ಅಪಾರ್ಟ್​​ಮೆಂಟ್​ ನಿರ್ಮಾಣಕ್ಕಾಗಿ ಮಣ್ಣು ಅಗೆಯುವಾಗ ಗೋಡೆ ಕುಸಿದು ಓರ್ವ ಕಾರ್ಮಿಕ ಮೃತಪಟ್ಟ ಘಟನೆ ಬೆಂಗಳೂರಲ್ಲಿ ನಡೆದಿದೆ.

ಗೋಡೆ ಕುಸಿದು ಓರ್ವ ಕಾರ್ಮಿಕ ಸಾವು
ಗೋಡೆ ಕುಸಿದು ಓರ್ವ ಕಾರ್ಮಿಕ ಸಾವು

By ETV Bharat Karnataka Team

Published : Dec 26, 2023, 6:10 AM IST

ಬೆಂಗಳೂರು: ಹೊಸ ಅಪಾರ್ಟ್​​ಮೆಂಟ್​ ನಿರ್ಮಾಣಕ್ಕಾಗಿ ಅಡಿಪಾಯ ಅಗೆಯುವಾಗ ಮಣ್ಣು ಕುಸಿದು ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ಮತ್ತೋರ್ವ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಸುದ್ದುಗುಂಟೆ ಪಾಳ್ಯ ಠಾಣಾ ವ್ಯಾಪ್ತಿಯ ಗುರಪ್ಪನ ಪಾಳ್ಯ ಬಳಿ ನಡೆದಿದೆ.

ಅಪಾರ್ಟ್ಮೆಂಟ್ ನಿರ್ಮಾಣಕ್ಕೆ ಎಂದು ಜೆಸಿಬಿ ಮೂಲಕ ಬುನಾದಿ ಹಾಕಲು ಮಣ್ಣು ಅಗೆಯುವಾಗ ಮೂರ್ನಾಲ್ಕು ಜನ ಕಾರ್ಮಿಕರು ಸಹಾಯಕ್ಕೆ ಎಂದು ಕೆಲಸ ಮಾಡುತ್ತಿದ್ದರು. ಈ ವೇಳೆ, ಪಕ್ಕದ ಕಟ್ಟಡದ ಕಾಂಪೌಂಡ್​ಗೆ ಜೆಸಿಬಿ ತಗುಲಿದ ಪರಿಣಾಮ ಮಣ್ಣು ಮತ್ತು ಕಾಂಪೌಂಡ್ ಕುಸಿದಿದ್ದು, ಘಟನೆಯಲ್ಲಿ ಬಿಹಾರದ ಸೋಮ್​ಪುರ ಮೂಲದ ರಂಜನ್ ಎಂಬ ಇಪ್ಪತ್ತು ವರ್ಷದ ಕಾರ್ಮಿಕ ಸಾವನ್ನಪ್ಪಿದ್ದು ಆತನ ಜೊತೆ ಅವಶೇಷಗಳ ಅಡಿ ಸಿಲುಕಿದ್ದ ಮತ್ತೋರ್ವ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಘಟನೆಯ ವಿವರ: ಇಂದು ಮಧ್ಯಾಹ್ನ 2.30ರ ಸುಮಾರಿಗೆ ಘಟನೆ ನಡೆದಿದೆ. ಎರಡು ಜೆಸಿಬಿ ಮೂಲಕ ಮಣ್ಣು ಅಗೆಯುವ ಕೆಲಸ ನಡೆಯುತಿತ್ತು. ಸುಮಾರು 18 - 20 ಅಡಿ ಮಣ್ಣು ಅಗೆಯಲಾಗಿತ್ತು. ಅಡಿಪಾಯ ಅಗೆಯುವ ಭರದಲ್ಲಿ ಜೆಸಿಬಿ ಚಾಲಕ ಪಕ್ಕದ ಮೂರು ಅಂತಸ್ಥಿನ ಬಿಲ್ಡಿಂಗ್​ನ ಕಾಂಪೌಂಡ್​ಗೆ ತಗುಲಿಸಿದ್ದಾನೆ. ಪರಿಣಾಮ ಕಾಂಪೌಂಡ್ ಬೀಳುವುದರ ಜೊತೆಗೆ ಮಣ್ಣು ಹೆಚ್ಚುವರಿಯಾಗಿ ಕುಸಿದಿದ್ದು, ಅದರಲ್ಲಿ ಮೃತ ರಂಜನ್ ಸೇರಿ ಇಬ್ಬರು ಸಿಲುಕಿದ್ದರು. ಕೂಡಲೇ ಸ್ಥಳದಲ್ಲಿದ್ದ ಕಾರ್ಮಿಕರು ರಕ್ಷಣೆಗೆ ಮುಂದಾಗಿದ್ದಾರೆ.

ಬಳಿಕ ಎಸ್ ಜಿ ಪಾಳ್ಯ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿ ಅವಶೇಷಗಳಡಿ ಸಿಲುಕ್ಕಿದ್ದವರನ್ನು ಹೊರ ತೆಗೆದಿದ್ದಾರೆ. ಆದರೇ ದುರಾದೃಷ್ಟವಶಾತ್ ಮಣ್ಣಿನ ಅವಶೇಷಗಳ ಅಡಿ ಸಿಲುಕಿದ್ದ ರಂಜನ್ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ಇನ್ನೋರ್ವ ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾನೆ. ಆತನ ರಕ್ಷಣೆ ಮಾಡೋ ವೇಳೆಯೂ ಮತ್ತೆ ಮಣ್ಣು ಕುಸಿತ ಉಂಟಾಗಿತ್ತು. ಸದ್ಯ ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಎಸ್ ಜಿ ಪಾಳ್ಯ ಪೊಲೀಸರು ಮಾಲೀಕ, ಗುತ್ತಿಗೆದಾರ ಹಾಗೂ ಇಬ್ಬರು ಜೆಸಿಬಿ ನಿರ್ವಾಹಕರ​ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಬ್ಬರು ಜೆಸಿಬಿ ಡ್ರೈವರ್​ಗಳನ್ನ ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರೆದಿದೆ.

ಈ ಹಿಂದೆ ಕೂಡ ಕಟ್ಟಡ ಕಾಂಪೌಂಡ್‌ನ ದುರಸ್ತಿ ಕೆಲಸ ನಡೆಯುತ್ತಿದ್ದಾಗ ಗೋಡೆ ಕುಸಿದು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದ ಘಟನೆ ಭಾರತಿ ನಗರ ಎಂಇಜಿ‌ ಆಫೀಸರ್ಸ್ ಕಾಲೋನಿ ಆವರಣದಲ್ಲಿ ನಡೆದಿತ್ತು.

ಇದನ್ನೂ ಓದಿ:ಮಂಗಳೂರು: ಉಳ್ಳಾಲದಲ್ಲಿ ವಿದ್ಯಾರ್ಥಿಗಳ ಮೇಲೆ ನೈತಿಕ ಪೊಲೀಸ್‌ಗಿರಿ

ABOUT THE AUTHOR

...view details