ಬೆಂಗಳೂರು : ತನ್ನ ಪತ್ನಿಯನ್ನೇ ಪತಿರಾಯನೊಬ್ಬ ಭೀಕರವಾಗಿ ಹತ್ಯೆಗೈದಿರುವ ಘಟನೆ ನಗರದ ಭೈರಪ್ಪಲೇಔಟ್‌ನಲ್ಲಿ ನಡೆದಿದೆ.
ಮುಜಾಮಿಲ್ ಪಾಷಾ ಎಂಬಾತ ಅನೈತಿಕ ಕಾರಣದ ನೆಪದಲ್ಲಿ ಆತನ ಪತ್ನಿ ಆಯೇಷಾ ಭಾನು ಎಂಬುವರನ್ನ ಭೀಕರವಾಗಿ ಹತ್ಯೆ ಮಾಡಿದ್ದಾನೆ. ತಡರಾತ್ರಿ ತನ್ನ ಪತ್ನಿಯನ್ನೇ ಕೊಚ್ಚಿ ಕೊಂದ ಆರೋಪಿ ಪತಿ, ಇಂದು ಬೆಳಗ್ಗೆ 3ರ ಸುಮಾರಿಗೆ ಗೋವಿಂದಪುರ ಪೊಲೀಸ್ ಠಾಣೆಗೆ ಆಗಮಿಸಿದ್ದ. ತಾನು ತನ್ನ ಪತ್ನಿಯನ್ನ ಕೊಂದಿದ್ದೇನೆ ಎಂದು ಪೊಲೀಸರ ಮುಂದೆ ಮಚ್ಚು ಸಮೇತ ಶರಣಾಗಿದ್ದ.
ಪತ್ನಿ ಸಹಕರಿಸುತ್ತಿಲ್ಲ ಎಂದು ಕೊಂದ ಪತಿ :ಮೂಲತಃ ರಾಮನಗರ ನಿವಾಸಿಯಾಗಿರುವ ಆರೋಪಿ, ನಗರದಲ್ಲಿ ಆಟೋ ಓಡಿಸಿಕೊಂಡಿದ್ದ. ಹನ್ನೊಂದು ವರ್ಷದ ಹಿಂದೆ ಆಯೇಷಾ ಭಾನುವನ್ನ ಮದುವೆಯಾಗಿದ್ದ. ಮುಜಾಮಿಲ್ ಪಾಷಾ ದಂಪತಿಗೆ ಈಗಾಗಲೇ ಮೂರು ಮಕ್ಕಳಿವೆ.
ಇತ್ತೀಚೆಗೆ ಗಂಡನಿಗೆ ಆಯೇಷಾ ಭಾನು ಸಹಕಾರ ನೀಡದ ಹಿನ್ನೆಲೆ ಇಬ್ಬರ ನಡುವೆ ಕಿರಿಕ್ಗಳು ನಡೆಯುತ್ತಲೇ ಇತ್ತು ಎಂದು ಪೂರ್ವ ವಿಭಾಗದ ಡಿಸಿಪಿ ಡಾ. ಭೀಮಾಶಂಕರ್ ಗುಳೇದ್ ಪ್ರಕರಣದ ಕುರಿತು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಉಕ್ರೇನ್ನಲ್ಲಿ ಪುತ್ರಿಗೆ ಸಿಗದ ಆಹಾರ.. ಅನ್ನ-ನೀರು ಬಿಟ್ಟು ತಂದೆ-ತಾಯಿಯಿಂದ ಪ್ರಾರ್ಥನೆ..
ಮಚ್ಚಿನಿಂದ ಕೊಚ್ಚಿ ಸೀದಾ ಪೊಲೀಸ್ ಠಾಣೆಗೆ :ಇತ್ತೀಚಿಗೆ ಮಕ್ಕಳನ್ನ ಬೇರೆ ಕೊಠಡಿಯಲ್ಲಿ ಮಲಗಿಸಿ ಬಳಿ ಬರುತ್ತಿದ್ದ ಆರೋಪಿಯನ್ನು ಪತ್ನಿ ಕೀಳಾಗಿ ಬೈಯುತ್ತಿದ್ದಳಂತೆ. ಈ ಹಿನ್ನೆಲೆ ಹಿರಿಯರ ನಡುವೆ ರಾಜಿ ಪಂಚಾಯ್ತಿ ಕೂಡ ನಡೆದಿತ್ತು. ಆದರೆ, ಯಾವುದೂ ಪ್ರಯೋಜನವಾಗಿರಲಿಲ್ಲ.
ಪ್ರತಿ ದಿನ ಮನೆಯಲ್ಲಿ ಜಗಳವಿದ್ದ ಕಾರಣ ಮುಜಾಮಿಲ್ ಖಿನ್ನತೆಗೆ ಒಳಗಾಗಿದ್ದನಂತೆ. ನಿನ್ನೆ ಕೂಡ ಇದೇ ವಿಚಾರಕ್ಕೆ ಜಗಳ ನಡೆದಿತ್ತು. ಕೊನೆಗೆ ಮಧ್ಯರಾತ್ರಿ ಪತ್ನಿಯ ಕತ್ತನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ನೇರವಾಗಿ ಪೊಲೀಸ್ ಠಾಣೆಗೆ ಬಂದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನ್ಯಾಯಾಂಗ ಬಂಧನಕ್ಕೆ ಆರೋಪಿ :ಸದ್ಯ ಆರೋಪಿಯನ್ನ ಬಂಧಿಸಿರುವ ಪೊಲೀಸರು, ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಿದ್ದಾರೆ. ಈ ಸಂಬಂಧ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.