ಬೆಂಗಳೂರು: ಅತಿಥಿ ದೇವೋಭವ ಎಂಬ ಪರಿಕಲ್ಪನೆಯನ್ನ ಅತ್ಯಂತ ಗೌರವದಿಂದ ಆಚರಿಸುವ ದೇಶ ಭಾರತ. ಭಾರತದ ಯೂಟ್ಯೂಬರ್ಗಳು ಗಡಿ ದಾಟಿ ವಿಶ್ವದ ಮೂಲೆ ಮೂಲೆ ಪರಿಚಯಿಸುತ್ತಿರುವ ಈ ದಿನಗಳಲ್ಲಿ ಭಾರತೀಯರನ್ನು ಅಲ್ಲಿನ ಜನ ಬರಮಾಡಿಕೊಳ್ಳುವ ರೀತಿಯೂ ಸಹ ಅತಿಥಿ ದೇವೋಭವದ ಪರಿಕಲ್ಪನೆಯನ್ನ ಮತ್ತೊಮ್ಮೆ ನೆನಪಿಸುತ್ತಿದೆ. ಆದರೆ, ಅತಿಥಿ ಸತ್ಕಾರದಲ್ಲಿ ಸದಾ ಮುಂದು ಎನಿಸುವ ನಮ್ಮದೇ ರಾಜ್ಯದ, ರಾಜಧಾನಿ ಬೆಂಗಳೂರಿನಲ್ಲಿ ಇದಕ್ಕೆ ತದ್ವಿರುದ್ಧ ಎನಿಸುವ ಘಟನೆಯೊಂದು ನಡೆದಿದೆ ಎಂದು ಆರೋಪಿಸಲಾಗಿದೆ.
ಬೆಂಗಳೂರನ್ನ ಸುತ್ತಾಡಲು ಬಂದಿದ್ದ ನೆದರ್ಲೆಂಡ್ ಮೂಲದ ಖ್ಯಾತ ಯೂಟ್ಯೂಬರ್ ಮ್ಯಾಡ್ಲಿ ರೋವರ್ ಎಂಬಾತನಿಗೆ ಸ್ಥಳೀಯನೊಬ್ಬ ಕಿರುಕುಳ ನೀಡಿದ್ದಾರೆ ಎನ್ನಲಾದ ಘಟನೆ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ನಡೆದಿದೆ. ನೆದರ್ಲೆಂಡ್ ಮೂಲದ ಮ್ಯಾಡ್ಲಿ ಕಳೆದ ಎರಡು ತಿಂಗಳಿನಿಂದ ಕರ್ನಾಟಕ ಪ್ರವಾಸದಲ್ಲಿದ್ದಾರೆ. ಬೆಂಗಳೂರನ್ನು ಪರಿಚಯಿಸುತ್ತಾ ವ್ಲಾಗ್ ಮಾಡುತ್ತಿರುವಾಗ ತಡೆದ ಸ್ಥಳೀಯರೊಬ್ಬರು ಮ್ಯಾಡ್ಲಿಯನ್ನು ರಸ್ತೆಯಲ್ಲಿ ಎಳೆದಾಡಿ, ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ವ್ಯಕ್ತಿಯಿಂದ ಮ್ಯಾಡ್ಲಿ ತಪ್ಪಿಸಿಕೊಂಡ ದೃಶ್ಯಗಳು ಲೈವ್ ರೆಕಾರ್ಡಿಂಗ್ನಲ್ಲಿ ಸೆರೆಯಾಗಿವೆ.
ಘಟನೆಯ ಕುರಿತು ಮುದಾಸಿರ್ ಅಹಮದ್ ಎಂಬುವವರು ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, ಘಟನೆ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಘಟನೆಯ ಕುರಿತು ಬೆಂಗಳೂರುನಗರ ಪೊಲೀಸರು ರೀಟ್ವೀಟ್ ಮಾಡಿ, ಅಗತ್ಯ ಕ್ರಮಕ್ಕಾಗಿ ನಿಮ್ಮ ಮನವಿಯನ್ನು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಅವರ ಗಮನಕ್ಕೆ ತರಲಾಗಿದೆ ಎಂದು ಬರೆದಿದ್ದಾರೆ.
ಆರೋಪಿ ಬಂಧನ :ಕಾಟನ್ ಪೇಟೆ ಠಾಣಾ ಪೊಲೀಸರು ಈ ಬಗ್ಗೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ನವಾಬ್ ಹಯಾತ್ ಶರೀಫ್ ಎಂಬಾತನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.
ಏರ್ಲೈನ್ ಮಹಿಳಾ ಸಿಬ್ಬಂದಿಯೊಂದಿಗೆ ಪ್ರಯಾಣಿಕನ ಅಸಭ್ಯ ವರ್ತನೆ :ಕೆಲ ದಿನಗಳ ಹಿಂದೆ ಪ್ರಯಾಣಿನೊಬ್ಬ ಇಂಡಿಗೊ ಏರ್ಲೈನ್ಸ್ನ ಮಹಿಳಾ ಸಿಬ್ಬಂದಿಯೊಬ್ಬರೊಂದಿಗೆ ಉದ್ದೇಶಪೂರ್ವಕವಾಗಿ ಅಸಭ್ಯವಾಗಿ ವರ್ತಿಸಿರುವ ಆರೋಪ ಕೇಳಿಬಂದಿತ್ತು. ಅಸಭ್ಯವಾಗಿ ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ ಮಹಿಳಾ ಸಿಬ್ಬಂದಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕೇರಳ ಮೂಲದಸಿಜಿನ್ ಎಂಬ ಪ್ರಯಾಣಿಕನ ವಿರುದ್ಧ ದೂರು ದಾಖಲಾಗಿತ್ತು. ವಿಮಾನ ಕೊಚ್ಚಿನ್ನಿಂದ ಬೆಂಗಳೂರು ಮಾರ್ಗದ ಮೂಲಕ ಭೋಪಾಲ್ ಕಡೆಗೆ ಹೊರಟಿತ್ತು.
ಸಿಜಿನ್ ಎಂಬ ಪ್ರಯಾಣಿಕ ಗೋವಾಕ್ಕೆ ಪ್ರಯಾಣಿಸುತ್ತಿದ್ದರು. ಬಳಿಕ ಸಿಜಿನ್, ಮಹಿಳಾ ಸಿಬ್ಬಂದಿ ಬಳಿ ತೆರಳಿ ವಿಮಾನ ಬದಲಾಯಿಸಬೇಕೆಂದು ಮಾಹಿತಿ ಕೇಳಿದ್ದರು. ಸಿಬ್ಬಂದಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದು ಗೋವಾಕ್ಕೆ ಬೇರೊಂದು ವಿಮಾನದಲ್ಲಿ ಹೋಗಬೇಕೆಂದು ತಿಳಿಸಿದ್ದರು. ನಂತರ ಮಹಿಳಾ ಸಿಬ್ಬಂದಿ ಸೀಟ್ ಬಳಿ ನಿಂತಿದ್ದ ವೇಳೆ ಸಿಜಿನ್ ಸುಖಾಸುಮ್ಮನೆ ಆ ಸಿಬ್ಬಂದಿಯ ಹಿಂಬದಿ ಬಂದು ಟಚ್ ಮಾಡಿದ್ದಾರಂತೆ. ಯಾಕೆ ಟಚ್ ಮಾಡಿದ್ದೀಯಾ ಎಂದು ಪ್ರಶ್ನಿಸಿದಾಗ, ಯಾವುದೇ ಉತ್ತರ ನೀಡದೆ ಸುಮ್ಮನಾಗಿದ್ದಾರೆ. ಈ ಹಿನ್ನೆಲೆ ಪ್ರಕರಣ ದಾಖಲಿಸಿದ್ದರು.
ಇದನ್ನೂ ಓದಿ :ವಿಡಿಯೋ ಸ್ಟ್ರೀಮಿಂಗ್ ವೇಳೆ ಕೊರಿಯನ್ ಯುವತಿಯೊಂದಿಗೆ ಅಸಭ್ಯ ವರ್ತನೆ