ಕರ್ನಾಟಕ

karnataka

ETV Bharat / state

ಎಐಸಿಸಿ ಅಧ್ಯಕ್ಷರಾಗಿ ರಾಜ್ಯಕ್ಕೆ ಮೊದಲ ಬಾರಿ ಆಗಮಿಸುತ್ತಿರುವ ಖರ್ಗೆ: ಬೆಂಗಳೂರಲ್ಲಿ ಅದ್ಧೂರಿ ಸ್ವಾಗತಕ್ಕೆ ಕ್ಷಣಗಣನೆ - ಜನದಟ್ಟಣೆ ಬಿಸಿ

ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾನುವಾರ ಬೆಳಗ್ಗೆ ದೆಹಲಿಯಿಂದ ಬೆಂಗಳೂರಿಗೆ ಆಗಮಿಸುವರು. ಅವರ ಸ್ವಾಗತಕ್ಕೆ ರಾಜ್ಯ ಕಾಂಗ್ರೆಸ್ ಅದ್ಧೂರಿ ಸಿದ್ಧತೆ ಮಾಡಿಕೊಂಡಿದೆ. ನಗರದ ವಿವಿಧ ಕಡೆಗಳಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಖರ್ಗೆ ಅವರಿಗೆ ಭವ್ಯ ಸ್ವಾಗತಕೋರಲಿದ್ದು, ನಂತರ ಮಧ್ಯಾಹ್ನ 2.30ಕ್ಕೆ ಅರಮನೆ ಮೈದಾನದಲ್ಲಿ ನಡೆಯುವ 'ಸರ್ವೋದಯ ಸಮಾವೇಶ'ದಲ್ಲಿ ಭಾಗವಹಿಸಲಿದ್ದಾರೆ.

Bangalore gears up for a grand welcome for Mallikarjuna Khar
ಮಲ್ಲಿಕಾರ್ಜುನ ಖರ್ಗೆ ಅದ್ಧೂರಿ ಸ್ವಾಗತಕ್ಕೆ ಬೆಂಗಳೂರು ಸಜ್ಜು

By

Published : Nov 6, 2022, 10:15 AM IST

ಬೆಂಗಳೂರು:ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸ್ವಾಗತಿಸಲು ರಾಜ್ಯ ಕಾಂಗ್ರೆಸ್ ಅದ್ಧೂರಿ ಸಿದ್ಧತೆ ಮಾಡಿಕೊಂಡಿದೆ.

ಅದ್ಧೂರಿ ಮೆರವಣಿಗೆ:ಇಂದು ಬೆಳಗ್ಗೆ ದೆಹಲಿಯಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ರಾಜ್ಯ ಕಾಂಗ್ರೆಸ್ ನಾಯಕರು ಸ್ವಾಗತಿಸಲಿದ್ದಾರೆ. ಅಲ್ಲಿಂದ ಭಾರಿ ಮೆರವಣಿಗೆ ಮೂಲಕ ರಾಜ್ಯ ಕಾಂಗ್ರೆಸ್ ಕಚೇರಿಗೆ ಕರೆತರಲು ರಾಜ್ಯ ನಾಯಕರು ಸಂಪೂರ್ಣ ತಯಾರಿ ಮಾಡಿಕೊಂಡಿದ್ದಾರೆ. ಕೆಲ ಕಾಲ ನಾಯಕರ ಜತೆಗೆ ಸಮಾಲೋಚಿಸಿದ ಬಳಿಕ ಅರಮನೆ ಮೈದಾನದಲ್ಲಿ ಸರ್ವೋದಯ ಸಮಾವೇಶ ಸ್ಥಳಕ್ಕೆ ಖರ್ಗೆ ತೆರಳಲಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರೆಲ್ಲ ಒಗ್ಗಟ್ಟು ಪ್ರದರ್ಶಿಸಿ ವೇದಿಕೆ ಮೇಲೆ ಇದ್ದು, ರಾಷ್ಟ್ರೀಯ ಅಧ್ಯಕ್ಷರನ್ನು ಸನ್ಮಾನಿಸಲಿದ್ದಾರೆ.

ಸರ್ವೋದಯ ಸಮಾವೇಶ:ಬೆಳಗ್ಗೆ 10.55ಕ್ಕೆ ದೆಹಲಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಲ್ಲಿಕಾರ್ಜುನ ಖರ್ಗೆ ಬಂದಿಳಿಯಲಿದ್ದಾರೆ. ಅಲ್ಲಿಂದ ಏರ್ ಪೋರ್ಟ್ ರಸ್ತೆಯ ಟೋಲ್ ಗೇಟ್, ಹೆಬ್ಬಾಳ ಬಸ್ ನಿಲ್ದಾಣ, ಮೆಕ್ರಿ ಸರ್ಕಲ್ ಸೇರಿದಂತೆ 4 ಕಡೆಗಳಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಅವರಿಗೆ ಸ್ವಾಗತ ಕೋರಲಿದ್ದಾರೆ. ವಿಮಾನ ನಿಲ್ದಾಣದಿಂದ ರಾಜ್ಯ ಕಾಂಗ್ರೆಸ್ ಕಚೇರಿಗೆ ಆಗಮಿಸುವ ಖರ್ಗೆ ಅಲ್ಲಿಂದ ಅರಮನೆ ಮೈದಾನಕ್ಕೆ ತೆರಳಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಅರಮನೆ ಮೈದಾನದಲ್ಲಿ 'ಸರ್ವೋದಯ ಸಮಾವೇಶ' ನಡೆಯಲಿದೆ. ಅರಮನೆ ಮೈದಾನದಲ್ಲಿ ನಡೆಯುವ ಸಮಾವೇಶಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದು, ಸುಮಾರು ಒಂದು ಲಕ್ಷ ಕಾರ್ಯಕರ್ತರು ಸೇರುವ ನಿರೀಕ್ಷೆಯಿದೆ ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ.

ಕಾಂಗ್ರೆಸ್ ಶಕ್ತಿ ಪ್ರದರ್ಶನ:ವೇದಿಕೆ ಮೇಲೆ 100 ಪ್ರಮುಖ ನಾಯಕರು ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸಮಾವೇಶದಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ, ಕಾರ್ಯಾಧ್ಯಕ್ಷರು, ಪ್ರತಿಪಕ್ಷ ನಾಯಕರು, ಎಐಸಿಸಿ ಪದಾಧಿಕಾರಿಗಳು, ಶಾಸಕರು, ಸಂಸದರು, ಪರಿಷತ್ ಸದಸ್ಯರು ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬರುವ ಸ್ಥಳೀಯ ಸಂಸ್ಥೆ ಹಾಗೂ ವಿಧಾನಸಭೆ, ಬಿಬಿಎಂಪಿ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ತನ್ನ ಶಕ್ತಿ ಪ್ರದರ್ಶನಕ್ಕೆ ಈ ಸರ್ವೋದಯ ಸಮಾವೇಶ ಹಮ್ಮಿಕೊಂಡಿದೆ. ಇದರಿಂದ ಸಾಕಷ್ಟು ಜನರನ್ನು ಸೇರಿಸುವ ಗುರಿ ಹೊಂದಿದೆ.

ಬಳ್ಳಾರಿ ಮುಖ್ಯರಸ್ತೆಗೆ ಜನದಟ್ಟಣೆ ಬಿಸಿ:ಮೆರವಣಿಗೆ, ರಸ್ತೆಯಲ್ಲೇ ಅಭಿನಂದನೆ ನಡೆಯುವುದರಿಂದ ಬಳ್ಳಾರಿ ರಸ್ತೆಯಲ್ಲಿ ಸಂಪೂರ್ಣ ವಾಹನ ದಟ್ಟಣೆಯಾಗಲಿದೆ ಎಂಬ ಮಾಹಿತಿ ಇದೆ. ಭಾನುವಾರ ಇರುವ ಜತೆಗೆ ಹೆಬ್ಬಾಳದ ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದ ಕಡೆಯ ದಿನ ಇಂದು ಅಪಾರ ಸಂಖ್ಯೆಯಲ್ಲಿ ವೀಕ್ಷಕರನ್ನು ನಿರೀಕ್ಷಿಸಲಾಗುತ್ತಿದೆ. ಸಹಜವಾಗಿ ವಾಹನ ದಟ್ಟಣೆ ಇರಲಿದ್ದು, ಕಾಂಗ್ರೆಸ್ ರಾಷ್ಟ್ರೀಯ ನಾಯಕರ ಆಗಮನ ಸಂದರ್ಭದ ಮೆರವಣಿಗೆ ಸಹ ಸಾಕಷ್ಟು ದಟ್ಟಣೆ ಸೃಷ್ಟಿಸಲಿದೆ. ಜತೆಗೆ 2.30 ರಿಂದ ಅರಮನೆ ಮೈದಾನದ ತ್ರಿಪುರ ವಾಸಿನಿ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಬಳ್ಳಾರಿ ಮುಖ್ಯರಸ್ತೆ ಸಹಜವಾಗಿ ದಟ್ಟಣೆಗೆ ಒಳಗಾಗಲಿದೆ.

ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉತ್ಸಾಹ:ಕಾಂಗ್ರೆಸ್ ಪಕ್ಷದ ಅತ್ಯುನ್ನತ ಹುದ್ದೆಯನ್ನು ರಾಜ್ಯದ ಪ್ರಮುಖ ನಾಯಕ ವಹಿಸಿಕೊಳ್ಳುತ್ತಿರುವುದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಹಜವಾಗಿ ಭಾರಿ ಉತ್ಸಾಹ ಮೂಡಿಸಿದೆ. ಕಳೆದ ಕೆಲ ದಿನಗಳಿಂದ ಕಾಂಗ್ರೆಸ್ ಸಹ ದೊಡ್ಡ ಸಮಾವೇಶ, ಸಮಾರಂಭ ಹಮ್ಮಿಕೊಂಡಿಲ್ಲ. ರಾಜ್ಯ ರಾಜಧಾನಿಯಲ್ಲಿ ಶಕ್ತಿ ಪ್ರದರ್ಶನ ನಡೆಸಲು ಸಿಕ್ಕ ಅವಕಾಶವನ್ನು ಕಾಂಗ್ರೆಸ್ ಸದ್ಬಳಕೆ ಮಾಡಿಕೊಳ್ಳಲಿದೆ .
ಇದನ್ನೂ ಓದಿ:ರೈತರ ಸಾಲದ ಮೇಲೆ ಜಪ್ತಿ ಹರಾಜು ಮಾಡಬಾರದು ಎಂಬ ಕಾನೂನನ್ನು ತರಲಾಗುವುದು: ಬಸವರಾಜ್​ ಬೊಮ್ಮಾಯಿ

ABOUT THE AUTHOR

...view details